ನವದೆಹಲಿ: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ (ಫೆಬ್ರವರಿ 22) ನಡೆಯಲಿರುವ ಬಹುನಿರೀಕ್ಷಿತ ಟಿ20 ವಿಶ್ವಕಪ್ ಸೂಪರ್-8 ಹಂತದ ಪಂದ್ಯ ಕೇವಲ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕಾದಾಟ ಮಾತ್ರವಲ್ಲ, ಇಬ್ಬರು ಸಹೋದರರ ನಡುವಿನ ಪ್ರತಿಷ್ಠೆಯ ಕದನಕ್ಕೂ ಸಾಕ್ಷಿಯಾಗಲಿದೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರಾದ ಆಲ್ಬಿ ಮೋರ್ಕೆಲ್ (Albie Morkel) ಮತ್ತು ಮೋರ್ನೆ ಮೋರ್ಕೆಲ್ (Morne Morkel) ಪರಸ್ಪರ ವಿರೋಧಿ ಪಾಳಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಿಸಿಸಿಐ (BCCI) ಬಿಡುಗಡೆ ಮಾಡಿರುವ ವಿಶೇಷ ವಿಡಿಯೋವೊಂದರಲ್ಲಿ ಈ ಸಹೋದರರಿಬ್ಬರು ತಮ್ಮ ಹಿತ್ತಲ ಅಂಗಳದ ಬಾಲ್ಯದ ದಿನಗಳ ಜಗಳ, ಪ್ರಸ್ತುತ ಜವಾಬ್ದಾರಿಗಳು ಮತ್ತು ಮುಂಬರುವ ಪಂದ್ಯದ ಕುರಿತು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ವಿರೋಧಿ ಪಾಳಯಗಳಲ್ಲಿ ಮೋರ್ಕೆಲ್ ಬ್ರದರ್ಸ್
ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಒಟ್ಟು 48 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟಿಗೆ ಕಣಕ್ಕಿಳಿದಿದ್ದ ಮೋರ್ಕೆಲ್ ಸಹೋದರರು, ಇದೀಗ ಕೋಚಿಂಗ್ ವೃತ್ತಿಯಲ್ಲೂ ಮುಖಾಮುಖಿಯಾಗುತ್ತಿದ್ದಾರೆ. 2024ರಿಂದ ಭಾರತ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಸಹೋದರ ಮೋರ್ನೆ ಮೋರ್ಕೆಲ್ ಟೀಮ್ ಇಂಡಿಯಾದ ಗೆಲುವಿಗೆ ತಂತ್ರ ಹೆಣೆಯುತ್ತಿದ್ದರೆ, ಅತ್ತ ಹಿರಿಯ ಸಹೋದರ ಆಲ್ಬಿ ಮೋರ್ಕೆಲ್ ದಕ್ಷಿಣ ಆಫ್ರಿಕಾ ತಂಡದ ‘ಸ್ಪೆಷಲಿಸ್ಟ್ ಕನ್ಸಲ್ಟೆಂಟ್’ (Specialist Consultant) ಆಗಿ ಶುಕ್ರಿ ಕಾನ್ರಾಡ್ ಅವರ ಸಹಾಯಕ ಸಿಬ್ಬಂದಿ ಬಳಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
“ಸ್ಪೆಷಲಿಸ್ಟ್ ಕನ್ಸಲ್ಟೆಂಟ್ ಎಂಬುದು ಹೇಳಲು ದೊಡ್ಡ ಪದ. ಆದರೆ ನನ್ನ ಕೆಲಸ ತುಂಬಾ ಸರಳ. ಭಾನುವಾರದ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಹೇಗೆ ಸೋಲಿಸಬೇಕು ಎಂಬುದಕ್ಕೆ ತಂತ್ರಗಳನ್ನು ರೂಪಿಸುವುದೇ ನನ್ನ ಜವಾಬ್ದಾರಿ” ಎಂದು ಆಲ್ಬಿ ಮೋರ್ಕೆಲ್ ನಗುನಗುತ್ತಲೇ ಹೇಳಿದ್ದಾರೆ. ತಮ್ಮ ಕೋಚಿಂಗ್ ಪಯಣವನ್ನು ಒಟ್ಟಿಗೆ ಆರಂಭಿಸಿದ್ದ ಈ ಸಹೋದರರಲ್ಲಿ, ಮೋರ್ನೆ ಅವರನ್ನು ಅತ್ಯುತ್ತಮ ಬೌಲಿಂಗ್ ಕೋಚ್ ಆಗಿ ರೂಪಿಸಿದ ಶ್ರೇಯಸ್ಸು ತಮಗೇ ಸಲ್ಲಬೇಕು ಎಂದು ಆಲ್ಬಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಬಾಲ್ಯದ ದಿನಗಳ ಹಿತ್ತಲಂಗಳದ ಜಗಳಗಳು
ಆಲ್ಬಿಗಿಂತ ಮೂರು ವರ್ಷ ಕಿರಿಯವರಾಗಿರುವ ಮೋರ್ನೆ ಮೋರ್ಕೆಲ್, ಬಾಲ್ಯದ ದಿನಗಳ ಆಟವನ್ನು ಮೆಲುಕು ಹಾಕುತ್ತಾ, “ನಾನು ಮನೆಯಲ್ಲಿ ಕಿರಿಯವನಾಗಿದ್ದೆ. ಆದ್ದರಿಂದ ಅವರು ಹೇಳಿದ್ದನ್ನು ಚಾಚೂತಪ್ಪದೆ ಪಾಲಿಸುತ್ತಿದ್ದೆ. ನನ್ನ ಕಡೆಯಿಂದ ಯಾವತ್ತೂ ಸ್ಪರ್ಧಾತ್ಮಕ ಮನೋಭಾವ ಇರಲಿಲ್ಲ” ಎಂದಿದ್ದಾರೆ. ಇದಕ್ಕೆ ದನಿಗೂಡಿಸಿದ ಆಲ್ಬಿ ಮೋರ್ಕೆಲ್, “ಹಿತ್ತಲಂಗಳದ ಆಟಗಳಲ್ಲಿ ಬ್ಯಾಟರ್ ಯಾವತ್ತೂ ಔಟ್ ಆಗುತ್ತಿರಲಿಲ್ಲ, ಆದರೆ ಬೌಲರ್ ದೃಷ್ಟಿಯಲ್ಲಿ ಆತ ಯಾವಾಗಲೂ ಔಟ್ ಆಗಿರುತ್ತಿದ್ದ. ಈ ವಿಚಾರವಾಗಿ ನಮ್ಮಿಬ್ಬರ ನಡುವೆ ಸದಾ ಜಗಳ ನಡೆಯುತ್ತಿತ್ತು ಮತ್ತು ಬಹುತೇಕ ಪಂದ್ಯಗಳು ಕಣ್ಣೀರಿನೊಂದಿಗೆ ಅಂತ್ಯಗೊಳ್ಳುತ್ತಿದ್ದವು” ಎಂದು ಸ್ಮರಿಸಿಕೊಂಡಿದ್ದಾರೆ. “ನಾನು ಕಿರಿಯವನಾಗಿದ್ದ ಕಾರಣ ಆಟದ ವೇಳೆ ಅಣ್ಣನ ಮಾತನ್ನು ಕೇಳಬೇಕಿತ್ತು. ಹಾಗಾಗಿ ನಾನು ಸಾಕಷ್ಟು ಬಾರಿ ಅತ್ತಿದ್ದೇನೆ” ಎಂದು ಮೋರ್ನೆ ಕೂಡ ಒಪ್ಪಿಕೊಂಡಿದ್ದಾರೆ.
ಗೆಲುವೇ ಗುರಿ, ಕ್ರೀಡಾಸ್ಫೂರ್ತಿಯೇ ಆದ್ಯತೆ
ಭಾನುವಾರದ ಪಂದ್ಯದಲ್ಲಿ ಇಬ್ಬರಿಗೂ ತಮ್ಮ ತಮ್ಮ ತಂಡವನ್ನು ಗೆಲ್ಲಿಸುವುದಷ್ಟೇ ಏಕೈಕ ಗುರಿಯಾಗಿದೆ. ಪಂದ್ಯದ ಕುರಿತು ಕುಟುಂಬದವರು ಹಾಸ್ಯ ಮಾಡುತ್ತಾರಾದರೂ, ತಾವು ಮಾತ್ರ ಅತ್ಯಂತ ವೃತ್ತಿಪರತೆಯಿಂದ ಮತ್ತು ಶಾಂತವಾಗಿ ವರ್ತಿಸುವುದಾಗಿ ಮೋರ್ನೆ ಸ್ಪಷ್ಟಪಡಿಸಿದ್ದಾರೆ.
“ಆಟಗಾರರಾಗಿದ್ದ ದಿನಗಳಲ್ಲೂ ನಾವು ಮೈದಾನದ ಒಳಗೆ ಅಥವಾ ಹೊರಗೆ ಪಂದ್ಯಗಳ ಬಗ್ಗೆ ಹೆಚ್ಚೇನೂ ಮಾತನಾಡುತ್ತಿರಲಿಲ್ಲ. ಈ ವಿಶ್ವಕಪ್ ಮುಗಿದ ಮೇಲೂ ಜೀವನ ಮುಂದುವರಿಯುತ್ತದೆ. ಆತ ನನ್ನ ಕುಟುಂಬ ಮತ್ತು ತಂಡದ ಆಟಗಾರರು ನನ್ನ ಸ್ನೇಹಿತರು. ನಾವೆಲ್ಲರೂ ಮತ್ತೆ ಭೇಟಿಯಾಗಲಿದ್ದೇವೆ” ಎಂದು ಮೋರ್ನೆ ಮೋರ್ಕೆಲ್ ಹೇಳುವ ಮೂಲಕ, ಎಷ್ಟೇ ಪೈಪೋಟಿ ಇದ್ದರೂ ಅಂತಿಮವಾಗಿ ಕ್ರೀಡಾಸ್ಫೂರ್ತಿ ಮತ್ತು ಕೌಟುಂಬಿಕ ಬಾಂಧವ್ಯವೇ ಮುಖ್ಯ ಎಂಬುದನ್ನು ಒತ್ತಿಹೇಳಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಸೂಪರ್-8 | 2024ರ ಫೈನಲ್ ಬಳಿಕ ಮತ್ತೆ ಮುಖಾಮುಖಿಯಾಗಲಿರುವ ಭಾರತ-ದಕ್ಷಿಣ ಆಫ್ರಿಕಾ



















