ಪುಣೆ: ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್ ಗುರುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (ಎಸ್‌ಎಂಎಟಿ) 2025ರ ಫೈನಲ್ ಪಂದ್ಯದಲ್ಲಿ ಹರಿಯಾಣ ವಿರುದ್ಧ ಸ್ಪೋಟಕ ಶತಕ ಸಿಡಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಎಸ್‌ಎಂಎಟಿ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಕಿಶನ್ ಪಾತ್ರರಾಗಿದ್ದಾರೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ, ಬಿಸಿಸಿಐ ಆಯ್ಕೆದಾರರಾದ ಪ್ರಗ್ಯಾನ್ ಓಜಾ ಮತ್ತು ಆರ್.ಪಿ. ಸಿಂಗ್ ಅವರ ಸಮ್ಮುಖದಲ್ಲೇ ಕಿಶನ್ ತಮ್ಮ ಬ್ಯಾಟಿಂಗ್ ವೈಭವ ಮೆರೆದರು.
ಒಂಟಿ ಕೈಯಲ್ಲಿ ಸಿಕ್ಸರ್ ಸಿಡಿಸಿ ಶತಕ ಪೂರೈಸಿದ ಕಿಶನ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ ಆರಂಭದಲ್ಲೇ ವಿರಾಟ್ ಸಿಂಗ್ ವಿಕೆಟ್ ಕಳೆದುಕೊಂಡಿತು. ಆದರೆ ಧೃತಿಗೆಡದ ಇಶಾನ್ ಕಿಶನ್, ಕುಮಾರ್ ಕುಶಾಗ್ರ ಜೊತೆಗೂಡಿ ಹರಿಯಾಣ ಬೌಲರ್‌ಗಳ ಮೇಲೆ ಮುಗಿಬಿದ್ದರು. ಪವರ್‌ಪ್ಲೇನಲ್ಲೇ ಅಬ್ಬರಿಸಿದ ಕಿಶನ್, ಮೈದಾನದ ಮೂಲೆಮೂಲೆಗೂ ಚೆಂಡನ್ನು ಅಟ್ಟಿದರು. ವಿಶೇಷವೆಂದರೆ, ಕವರ್ಸ್ ಕಡೆಗೆ ಒಂಟಿ ಕೈಯಲ್ಲಿ (one-handed slog) ಆಕರ್ಷಕ ಸಿಕ್ಸರ್ ಬಾರಿಸುವ ಮೂಲಕ ಅವರು ತಮ್ಮ ಶತಕವನ್ನು ಪೂರೈಸಿದರು. ಅಂತಿಮವಾಗಿ ಸುಮಿತ್ ಕುಮಾರ್ ಎಸೆತದಲ್ಲಿ ಔಟಾದರು.
ಈ ಇನ್ನಿಂಗ್ಸ್‌ನಲ್ಲಿ ನಿರ್ಮಾಣವಾದ ಪ್ರಮುಖ ದಾಖಲೆಗಳು:
- ಮೊದಲ ನಾಯಕ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಇತಿಹಾಸದಲ್ಲೇ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ನಾಯಕ ಎಂಬ ದಾಖಲೆ ಇಶಾನ್ ಕಿಶನ್ ಹೆಸರಿಗೆ ಸೇರಿದೆ.
- ಎರಡನೇ ಬ್ಯಾಟರ್: ಒಟ್ಟಾರೆಯಾಗಿ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ ಎರಡನೇ ಬ್ಯಾಟರ್ ಇವರಾಗಿದ್ದಾರೆ (ಅನ್ಮೋಲ್‌ಪ್ರೀತ್ ಸಿಂಗ್ ಮೊದಲಿಗರು).
- ದಾಖಲೆಯ ಜೊತೆಯಾಟ: ಇಶಾನ್ ಕಿಶನ್ ಮತ್ತು ಕುಮಾರ್ ಕುಶಾಗ್ರ ಜೋಡಿ 2ನೇ ವಿಕೆಟ್‌ಗೆ 177 ರನ್ ಕಲೆಹಾಕಿತು. ಇದು ಟೂರ್ನಿಯ ಫೈನಲ್ ಇತಿಹಾಸದಲ್ಲೇ ಅತ್ಯಧಿಕ ರನ್ ಜೊತೆಯಾಟವಾಗಿದೆ.
- ಗರಿಷ್ಠ ಶತಕಗಳು: ಇದು ಟೂರ್ನಿಯಲ್ಲಿ ಇಶಾನ್ ಅವರ 5ನೇ ಶತಕವಾಗಿದ್ದು, ಈ ಮೂಲಕ ಅತಿ ಹೆಚ್ಚು ಶತಕ ಬಾರಿಸಿದ ಅಭಿಷೇಕ್ ಶರ್ಮಾ ಅವರ ದಾಖಲೆಯನ್ನು ಸರಿದೂಗಿಸಿದ್ದಾರೆ.
ಇದನ್ನೂ ಓದಿ : ಧರ್ಮನಿಂದನೆ ಆರೋಪ : ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿ ಜೀವಂತವಾಗಿ ಸುಟ್ಟ ಪಾಪಿಗಳು



















