ನವದೆಹಲಿ: ಕೇಂದ್ರ ಸರ್ಕಾರವು ಕ್ಯಾಬ್ ಅಗ್ರಿಗೇಟರ್‌ಗಳಿಗೆ ಪೀಕ್-ಅವರ್‌ಗಳಲ್ಲಿ ದರ ಹೆಚ್ಚಳ (ಸರ್ಜ್ ಪ್ರೈಸಿಂಗ್) ಮಾಡಲು ಅಧಿಕೃತವಾಗಿ ಅನುಮತಿ ನೀಡಿದೆ. ಇದಲ್ಲದೇ, ಓಲಾ (Ola), ಊಬರ್ (Uber) ಮತ್ತು ರಾಪಿಡೋ (Rapido)ದಂತಹ ಅಗ್ರಿಗೇಟರ್ ಗಳ ಮೂಲಕ ಸ್ವಂತ ಬಳಕೆಯ ದ್ವಿಚಕ್ರ ವಾಹನಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ನೀಡಲು ಅನುಮೋದನೆ ನೀಡಿದೆ.
ಹೊಸ ನಿಯಮಗಳ ಪ್ರಕಾರ, ಕಡಿಮೆ ಬೇಡಿಕೆಯ ಅವಧಿಗಳಲ್ಲಿ (ಆಫ್-ಪೀಕ್ ಅವರ್) ಮೂಲ ದರದ ಶೇ.50ರಷ್ಟು ಕಡಿಮೆ ದರವನ್ನು ವಿಧಿಸಬಹುದು. ಆದರೆ, ಹೆಚ್ಚಿನ ಬೇಡಿಕೆಯ ಅವಧಿಗಳಲ್ಲಿ (ಪೀಕ್ ಅವರ್) ಗರಿಷ್ಠ 200% (ಮೂಲ ದರದ ದುಪ್ಪಟ್ಟು) ವರೆಗೆ ದರವನ್ನು ಹೆಚ್ಚಿಸಲು ಅವಕಾಶವಿದೆ. ಆದರೆ, ಪ್ರಯಾಣದ ದೂರ 3 ಕಿ.ಮೀ.ಗಿಂತ ಕಡಿಮೆ ಇದ್ದರೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲು ಅನುಮತಿ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಮಾರ್ಗಸೂಚಿಗಳ ಪ್ರಕಾರ, ದರ ಲೆಕ್ಕಾಚಾರವು ಪಿಕಪ್ ಪಾಯಿಂಟ್‌ನಿಂದ ಡ್ರಾಪ್ ಸ್ಥಳದವರೆಗೆ ಕಟ್ಟುನಿಟ್ಟಾಗಿ ಅನ್ವಯಿಸಬೇಕು. ನಿರ್ದಿಷ್ಟಪಡಿಸಿದ ಡೈನಾಮಿಕ್ ಬೆಲೆ ಮಿತಿಗಳನ್ನು ಮೀರಿ ಯಾವುದೇ ಗುಪ್ತ ಅಥವಾ ಹೆಚ್ಚುವರಿ ಶುಲ್ಕಗಳಿಗೆ ಅವಕಾಶವಿಲ್ಲ. ಅಲ್ಲದೆ, ಡ್ರೈವರ್ ಪಿಕಪ್ ಸ್ಥಳಕ್ಕೆ ತಲುಪಲು ಪ್ರಯಾಣಿಸುವ “ಡೆಡ್ ಮೈಲೇಜ್” (ಖಾಲಿ ದೂರ) ಗೆ ಪ್ರಯಾಣಿಕರಿಂದ ಶುಲ್ಕ ವಿಧಿಸುವುದನ್ನು ನಿಷೇಧಿಸಲಾಗಿದೆ. ಪಿಕಪ್ ಸ್ಥಳಕ್ಕೆ 3 ಕಿ.ಮೀ.ಗಿಂತ ಕಡಿಮೆ ದೂರವಿದ್ದರೆ ಮಾತ್ರ ಇದಕ್ಕೆ ವಿನಾಯಿತಿ ಇರುತ್ತದೆ.
ಒಂದು ವೇಳೆ ಚಾಲಕರು ಅಪ್ಲಿಕೇಶನ್‌ನಲ್ಲಿ ರೈಡ್ ಸ್ವೀಕರಿಸಿದ ನಂತರ ಯಾವುದೇ ಮಾನ್ಯ ಕಾರಣವಿಲ್ಲದೆ ರದ್ದುಗೊಳಿಸಿದರೆ, ಅಂದಾಜು ದರದ 10% ರಷ್ಟು ದಂಡ ವಿಧಿಸಲಾಗುತ್ತದೆ. ಇದು ಗರಿಷ್ಠ 100ರೂ.ಗಳವರೆಗೆ ಇರಲಿದೆ. ಈ ದಂಡದ ಮೊತ್ತವನ್ನು ಚಾಲಕ ಮತ್ತು ಅಗ್ರಿಗೇಟರ್ ವೇದಿಕೆ ಸಮಾನವಾಗಿ ಹಂಚಿಕೊಳ್ಳಬೇಕು. ಇದೇ ರೀತಿಯ ರದ್ದತಿ ದಂಡವು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಬುಕಿಂಗ್ ರದ್ದುಗೊಳಿಸುವ ಪ್ರಯಾಣಿಕರಿಗೂ ಅನ್ವಯವಾಗುತ್ತದೆ.
ಚಾಲಕರ ಕಲ್ಯಾಣಕ್ಕಾಗಿ ಮಹತ್ವದ ಕ್ರಮವಾಗಿ, ಎಲ್ಲಾ ಅಗ್ರಿಗೇಟರ್‌ಗಳು ತಮ್ಮ ವೇದಿಕೆಗಳೊಂದಿಗೆ ಸಂಬಂಧ ಹೊಂದಿರುವ ಪ್ರತಿ ಚಾಲಕರಿಗೆ ಕನಿಷ್ಠ 5 ಲಕ್ಷ ರೂ.ಗಳ ಆರೋಗ್ಯ ವಿಮೆ ಮತ್ತು 10 ಲಕ್ಷ ರೂ.ಗಳ ಅವಧಿ ವಿಮೆ (ಟರ್ಮ್ ಇನ್ಶೂರೆನ್ಸ್) ಕವರೇಜ್ ಒದಗಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
ರಾಜ್ಯ ಸರ್ಕಾರಗಳ ಪಾತ್ರ ಮತ್ತು ಸುರಕ್ಷತಾ ಕ್ರಮಗಳು
ಹೊಸ ನಿಯಮಗಳ ಅಡಿಯಲ್ಲಿ, ಆಟೋ-ರಿಕ್ಷಾಗಳು ಮತ್ತು ಬೈಕ್ ಟ್ಯಾಕ್ಸಿಗಳು ಸೇರಿದಂತೆ ವಿವಿಧ ವಾಹನಗಳಿಗೆ ಮೂಲ ದರಗಳನ್ನು ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಈ ವಾಹನಗಳು ಈಗ ಅಧಿಕೃತವಾಗಿ ಅಗ್ರಿಗೇಟರ್ ನೀತಿಯ ವ್ಯಾಪ್ತಿಗೆ ಬರಲಿವೆ. ದೆಹಲಿ ಮತ್ತು ಮುಂಬೈನಲ್ಲಿ ಪ್ರಸ್ತುತ ಪ್ರತಿ ಕಿ.ಮೀ.ಗೆ ಸುಮಾರು 20-21 ರೂ. ಮೂಲ ದರಗಳಿದ್ದರೆ, ಪುಣೆಯಲ್ಲಿ 18 ರೂ. ಇದೆ. ರಾಜ್ಯವು ಔಪಚಾರಿಕವಾಗಿ ಮೂಲ ದರಗಳನ್ನು ತಿಳಿಸದಿದ್ದರೆ, ಮೂಲ ದರವನ್ನು ಘೋಷಿಸುವುದು ಮತ್ತು ರಾಜ್ಯ ಸರ್ಕಾರಕ್ಕೆ ತಿಳಿಸುವುದು ಅಗ್ರಿಗೇಟರ್‌ನ ಜವಾಬ್ದಾರಿಯಾಗಿರುತ್ತದೆ.