ದುಬೈ: 2025ರ ಏಷ್ಯಾ ಕಪ್ ಟೂರ್ನಿಯ ಆರಂಭಕ್ಕೂ ಮುನ್ನ, ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನದ ಸಚಿವ ಮತ್ತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಅವರೊಂದಿಗೆ ಕೈಕುಲುಕಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಬಿಸಿಸಿಐ ಮತ್ತು ಸೂರ್ಯಕುಮಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ವಿವಾದ?
ಏಷ್ಯಾ ಕಪ್ ಟ್ರೋಫಿ ಅನಾವರಣ ಕಾರ್ಯಕ್ರಮದ ಬಳಿಕ ದುಬೈನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ 8 ತಂಡಗಳ ನಾಯಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರೂ ಆಗಿರುವ ಮೊಹ್ಸಿನ್ ನಖ್ವಿ ಅವರೊಂದಿಗೆ ಎಲ್ಲಾ ನಾಯಕರು ಹಸ್ತಲಾಘವ ಮಾಡಿದರು. ಇದೇ ಸಾಲಿನಲ್ಲಿ ಸೂರ್ಯಕುಮಾರ್ ಯಾದವ್ ಕೂಡ ನಖ್ವಿ ಅವರ ಕೈಕುಲುಕಿದ್ದಾರೆ.
ಇತ್ತೀಚೆಗೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿದೆ. ಮೊಹ್ಸಿನ್ ನಖ್ವಿ ಅವರು ಪಾಕಿಸ್ತಾನದ ಗೃಹ ಸಚಿವರೂ ಆಗಿರುವುದರಿಂದ, ಇಂತಹ ಸಂದರ್ಭದಲ್ಲಿ ಭಾರತದ ನಾಯಕ ಅವರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಂಡಿರುವುದು ಸರಿಯಲ್ಲ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರ ಆಕ್ರೋಶದ ಮಹಾಪೂರ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಕಟ್ಟೆಯೊಡೆದಿದೆ. “ಪಾಕಿಸ್ತಾನ ನಮ್ಮ ಮುಗ್ಧ ಜನರನ್ನು ಕೊಲ್ಲುತ್ತದೆ, ಇಲ್ಲಿ ನಾವು ಅವರೊಂದಿಗೆ ಕೈಕುಲುಕುತ್ತಿದ್ದೇವೆ. ನಾಚಿಕೆಗೇಡಿನ ಸಂಗತಿ!” ಎಂದು ಓರ್ವ ಬಳಕೆದಾರರು ಕಿಡಿಕಾರಿದ್ದಾರೆ. “ಭಾರತೀಯ ನಾಯಕನೊಬ್ಬ ಪಾಕಿಸ್ತಾನದ ಗೃಹ ಸಚಿವರೊಂದಿಗೆ ಫೋಟೋಗೆ ಪೋಸ್ ನೀಡಿರುವುದು ನಾಚಿಕೆಯ ಸಂಗತಿ. ಮೊಹ್ಸಿನ್ ನಖ್ವಿ ಅವರ ಕೈಯಲ್ಲಿ ರಕ್ತದ ಕಲೆಯಿದೆ” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪಹಲ್ಗಾಮ್ ದಾಳಿಯಲ್ಲಿ ಪ್ರಾಣತೆತ್ತ ಯೋಧರಿಗೆ ನಾವು ಕ್ಷಮೆ ಕೇಳುತ್ತೇವೆ. ನಮ್ಮ ದೇಶಕ್ಕೆ ಕ್ರಿಕೆಟ್ ರಾಜತಾಂತ್ರಿಕತೆಯೇ ಮುಖ್ಯವಾಗಿದೆ,” ಎಂದು ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ.



















