ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಅವರನ್ನು, ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಡಿ ಹೊಗಳಿದ್ದಾರೆ. ಮುಂಬರುವ ಮಹಿಳಾ ವಿಶ್ವಕಪ್‌ನಲ್ಲಿ ‘ವಿಮೆನ್ ಇನ್ ಬ್ಲೂ’ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿರುವ ಜೆಮಿಮಾ ಅವರಿಂದ, ಏಷ್ಯಾ ಕಪ್‌ನಲ್ಲಿ ಆಡುತ್ತಿರುವ ಪುರುಷರ ತಂಡವು ಕಲಿಯುವುದು ಸಾಕಷ್ಟಿದೆ ಎಂದು ಸೂರ್ಯಕುಮಾರ್ ಹೇಳಿದ್ದಾರೆ.
ಜಿಯೋಹಾಟ್‌ಸ್ಟಾರ್‌ನ ‘ಚಾಂಪಿಯನ್ಸ್ ವಾಲಿ ಬಾತ್: ಬಿಲೀವ್ ಇನ್ ಬ್ಲೂ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ದೊಡ್ಡ ಮತ್ತು ಒತ್ತಡದ ಪಂದ್ಯಗಳಲ್ಲಿ ಜೆಮಿಮಾ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇಂತಹ ಪ್ರದರ್ಶನವನ್ನು ನಾವೆಲ್ಲರೂ ಅಳವಡಿಸಿಕೊಳ್ಳಲು ಬಯಸುತ್ತೇವೆ. ಜೆಮಿಮಾಗೆ ‘ಚೋಟಾ ಪ್ಯಾಕೆಟ್, ಬಡಾ ಧಮಾಕಾ’ ಎಂಬ ಮಾತು ಸೂಕ್ತವಾಗಿದೆ. ಅವಳು ಈಗ ನೀಡುತ್ತಿರುವ ಪ್ರದರ್ಶನವನ್ನು ಮುಂದುವರಿಸಿದರೆ ಸಾಕು. ಅವಳ ಆಟವನ್ನು ನೋಡುವುದು ನನಗೆ ನಿಜಕ್ಕೂ ಖುಷಿ ಕೊಡುತ್ತದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಮ್ಮದೇ ತವರು ನಗರವಾದ ಮುಂಬೈನ ಆಟಗಾರ್ತಿಯೊಬ್ಬರು ರಾಜ್ಯ ಮತ್ತು ದೇಶಕ್ಕಾಗಿ ಇಷ್ಟೊಂದು ಸಾಧನೆ ಮಾಡಿರುವುದನ್ನು ನೋಡಿ ಸಂತೋಷವಾಗುತ್ತದೆ ಎಂದು ಸೂರ್ಯಕುಮಾರ್ ಹೇಳಿದ್ದಾರೆ. ಅಂಗಳದಲ್ಲಿ ತಂಡದ ಹುರುಪನ್ನು ಹೆಚ್ಚಿಸುವ ಮತ್ತು ಸಹ ಆಟಗಾರರಿಗೆ ಬೆಂಬಲವಾಗಿ ನಿಲ್ಲುವ ಜೆಮಿಮಾ ಅವರ ಗುಣವನ್ನು ಅವರು ಶ್ಲಾಘಿಸಿದ್ದಾರೆ.
“ಸ್ಥಳೀಯ ಪಂದ್ಯಗಳನ್ನಾಡಿ, ರಾಜ್ಯವನ್ನು ಪ್ರತಿನಿಧಿಸಿ, ನಂತರ ಭಾರತ ತಂಡಕ್ಕಾಗಿ ಆಡುವ ನಿಮ್ಮದೇ ನಗರದ ಆಟಗಾರರನ್ನು ನೋಡುವುದು ಯಾವಾಗಲೂ ಖುಷಿಯ ವಿಚಾರ. ವಿಶ್ವಕಪ್‌ಗಳಲ್ಲಿ ಮಾತ್ರವಲ್ಲ, ದ್ವಿಪಕ್ಷೀಯ ಸರಣಿಗಳಲ್ಲೂ ಜೆಮಿಮಾ ಅದ್ಭುತ ಪ್ರದರ್ಶನ ನೀಡಿದ್ದಾರೆ. ವಿಶ್ವಕಪ್ ಆಡುವುದು ಒಂದು ದೊಡ್ಡ ಅವಕಾಶ, ಮತ್ತು ಅವರು ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ. ಏಕೆಂದರೆ ಅವರು ಒಬ್ಬ ಉತ್ತಮ ತಂಡದ ಆಟಗಾರ್ತಿ, ಎಲ್ಲರಿಗೂ ಸಹಾಯ ಮಾಡುತ್ತಾರೆ. ನಾವೆಲ್ಲರೂ ನೋಡಿದಂತೆ, ಅವರು ಮೈದಾನದಲ್ಲಿ ಅದ್ಭುತ ಶಕ್ತಿಯನ್ನು ತರುತ್ತಾರೆ” ಎಂದು ಸೂರ್ಯಕುಮಾರ್ ಹೇಳಿದರು.
ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಮುಂಬರುವ ಎಂಟು ತಂಡಗಳ ಮಹಿಳಾ ವಿಶ್ವಕಪ್ ಪಂದ್ಯಾವಳಿಯನ್ನು ಭಾರತ ಮಹಿಳಾ ತಂಡವು ಸಹ-ಆತಿಥೇಯ ಶ್ರೀಲಂಕಾ ವಿರುದ್ಧದ ಪಂದ್ಯದೊಂದಿಗೆ ಆರಂಭಿಸಲಿದೆ. ಇತ್ತೀಚೆಗೆ, ಜ್ವರದ ಕಾರಣದಿಂದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಉಳಿದ ಪಂದ್ಯಗಳಿಂದ ಜೆಮಿಮಾ ಹೊರಗುಳಿದಿದ್ದರು.
“ಶಾನ್ ಮಸೂದ್, ಭಾರತದ ನಾಯಕ” : ಕಾಮೆಂಟರಿ ವೇಳೆ ದಕ್ಷಿಣ ಆಫ್ರಿಕಾದ ದಿಗ್ಗಜ ಶಾನ್ ಪೊಲಾಕ್ ಅವರಿಂದ ಮಹಾ ಪ್ರಮಾದ!