ಹೈದರಾಬಾದ್: ಬಾಡಿಗೆ ತಾಯ್ತನದ ಮೂಲಕ ಜನಿಸಿದ ಮಗುವಿಗೂ ತಮಗೂ ಯಾವುದೇ ವಂಶವಾಹಿ ಸಂಬಂಧವಿಲ್ಲ ಎಂಬುದನ್ನು ಡಿಎನ್ಎ ಪರೀಕ್ಷೆಯ ಮೂಲಕ ಖಚಿತಪಡಿಸಿಕೊಂಡ ದಂಪತಿ ನೀಡಿದ ದೂರಿನ ಮೇರೆಗೆ, ಹೈದರಾಬಾದ್ನ ಸಿಕಂದರಾಬಾದ್ನಲ್ಲಿ ನಡೆಯುತ್ತಿದ್ದ ಅಕ್ರಮ ಬಾಡಿಗೆ ತಾಯ್ತನ ಮತ್ತು ವೀರ್ಯ ಕಳ್ಳಸಾಗಣೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ, ವೈದ್ಯೆ ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿದೆ.
ಸಿಕಂದರಾಬಾದ್ನ ರೆಜಿಮೆಂಟಲ್ ಬಜಾರ್ನಲ್ಲಿರುವ ಯೂನಿವರ್ಸಲ್ ಸೃಷ್ಟಿ ಫರ್ಟಿಲಿಟಿ ಸೆಂಟರ್ ಮೇಲೆ ದಾಳಿ ನಡೆಸಲಾಗಿದ್ದು, ಅದರ ವ್ಯವಸ್ಥಾಪಕಿ ಡಾ. ನಮ್ರತಾ ಅವರನ್ನು ಬಂಧಿಸಲಾಗಿದೆ.
ರಾಜಸ್ಥಾನ ಮೂಲದ ದಂಪತಿ ಪ್ರಸ್ತುತ ಸಿಕಂದರಾಬಾದ್ನಲ್ಲಿ ವಾಸಿಸುತ್ತಿದ್ದು, ಕಳೆದ ವರ್ಷ ಬಾಡಿಗೆ ತಾಯ್ತನಕ್ಕಾಗಿ ಈ ಕ್ಲಿನಿಕ್ಗೆ 35 ಲಕ್ಷ ರೂಪಾಯಿ ಪಾವತಿಸಿದ್ದರು. ಈ ವರ್ಷ ಮಗು ಜನಿಸಿದಾಗ, ಬಾಡಿಗೆ ತಾಯಿಯ ಡಿಎನ್ಎ ಪರಿಶೀಲನೆಗೆ ದಂಪತಿ ಮನವಿ ಮಾಡಿದ್ದರು. ಆದರೆ, ಡಾ. ನಮ್ರತಾ ಈ ಪ್ರಕ್ರಿಯೆಯನ್ನು ಪದೇ ಪದೇ ವಿಳಂಬಗೊಳಿಸುತ್ತಿದ್ದರು. ಇದರಿಂದ ಅನುಮಾನಗೊಂಡ ದಂಪತಿ ದೆಹಲಿಯಲ್ಲಿ ಸ್ವತಂತ್ರವಾಗಿ ಡಿಎನ್ಎ ಪರೀಕ್ಷೆ ನಡೆಸಿದಾಗ, ಮಗುವಿಗೆ ತಮ್ಮೊಂದಿಗೆ ಯಾವುದೇ ವಂಶವಾಹಿ ಸಂಬಂಧವಿಲ್ಲ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಈ ಕುರಿತು ಡಾ. ನಮ್ರತಾ ಅವರನ್ನು ಪ್ರಶ್ನಿಸಿದಾಗ, ಅವರು “ತಪ್ಪಾಗಿದೆ” (ಮಿಕ್ಸಪ್) ಎಂದು ಒಪ್ಪಿಕೊಂಡು, ಸಮಸ್ಯೆಯನ್ನು ಬಗೆಹರಿಸಲು ಕಾಲಾವಕಾಶ ಕೋರಿದ್ದರು. ಆದರೆ, ನಂತರ ಅವರು ನಾಪತ್ತೆಯಾಗಿದ್ದರಿಂದ, ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್ ಕಾರ್ಯಾಚರಣೆ
ದೂರಿನ ಅನ್ವಯ, ಪೊಲೀಸರು ಫರ್ಟಿಲಿಟಿ ಸೆಂಟರ್ ಮೇಲೆ ದಾಳಿ ನಡೆಸಿ, ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಯ ವೇಳೆ, ಈ ಕ್ಲಿನಿಕ್ ಗುಜರಾತ್ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಿಗೆ ಅಕ್ರಮವಾಗಿ ವೀರ್ಯ ಮತ್ತು ಅಂಡಾಣುಗಳನ್ನು ಸಾಗಿಸುವ ಅಂತರರಾಜ್ಯ ಜಾಲವನ್ನು ಹೊಂದಿತ್ತು ಎಂಬುದು ಬೆಳಕಿಗೆ ಬಂದಿದೆ. ಅಲ್ಲದೆ, ‘ಇಂಡಿಯನ್ ಸ್ಪರ್ಮ್ ಟೆಕ್’ ಎಂಬ ಪರವಾನಗಿ ಇಲ್ಲದ ಸಂಸ್ಥೆಯೊಂದಿಗೆ ಸಹಯೋಗ ಹೊಂದಿದ್ದೂ ಪತ್ತೆಯಾಗಿದೆ.
ಈ ಜಾಲದಲ್ಲಿ ಭಾಗಿಯಾಗಿದ್ದ ‘ಇಂಡಿಯನ್ ಸ್ಪರ್ಮ್ ಟೆಕ್’ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಪಂಕಜ್ ಸೋನಿ ಸೇರಿದಂತೆ ಇತರ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಡಾ. ನಮ್ರತಾ ಅವರು ಬಡ ಮಹಿಳೆಯರನ್ನು ಬಾಡಿಗೆ ತಾಯ್ತನಕ್ಕೆ ಆಮಿಷವೊಡ್ಡಿ ಈ ಕೃತ್ಯ ಎಸಗುತ್ತಿದ್ದರು ಎಂದು ಹೈದರಾಬಾದ್ ಉತ್ತರ ವಲಯದ ಡಿಸಿಪಿ ರಶ್ಮಿ ಪೆರುಮಾಳ್ ತಿಳಿಸಿದ್ದಾರೆ. ಹೆರಿಗೆಗಾಗಿ ಹೈದರಾಬಾದ್ನಿಂದ ವಿಶಾಖಪಟ್ಟಣಂಗೆ ಮಹಿಳೆಯೊಬ್ಬರನ್ನು ವಿಮಾನದಲ್ಲಿ ಕರೆದೊಯ್ದು, ಆಕೆಗೆ ಹುಟ್ಟಿದ ಮಗುವೇ ದಂಪತಿಯದೆಂದು ನಂಬಿಸಿದ್ದರು.
ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯ್ದೆ ಮತ್ತು ಬಾಡಿಗೆ ತಾಯ್ತನ ಕಾನೂನುಗಳ ಉಲ್ಲಂಘನೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಜಾಲದಲ್ಲಿ ಇನ್ನಷ್ಟು ಫರ್ಟಿಲಿಟಿ ಕೇಂದ್ರಗಳು ಭಾಗಿಯಾಗಿರುವ ಶಂಕೆ ಇದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



















