ಸೂರತ್: ಭಾರತದ ಮೊದಲ ಕೃತಕ ಬುದ್ಧಿಮತ್ತೆ(ಎಐ) ಆಧರಿತ ವಿದ್ಯುತ್ ಚಾಲಿತ ಬೈಕ್ ರೋಡಿಗಿಳಿಯಲು ಸಜ್ಜಾಗಿದೆ. ಹೌಗು, ಗುಜರಾತ್‌ನ ಸೂರತ್‌ನ ಮೂವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಳೆಯ ಗುಜರಿ ಸಾಮಾನುಗಳನ್ನು ಬಳಸಿಕೊಂಡು ಈ ಎಐ ಚಾಲಿತ ಎಲೆಕ್ಟ್ರಿಕ್ ಬೈಕ್ ‘ಗರುಡ’ವನ್ನು ಸಿದ್ಧಪಡಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಭಗವಾನ್ ಮಹಾವೀರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಶಿವಂ ಮೌರ್ಯ, ಗುರುಪ್ರೀತ್ ಅರೋರಾ ಮತ್ತು ಗಣೇಶ್ ಪಾಟೀಲ್ ಸೇರಿ ಈ ಬೈಕ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಶೇ.50ರಷ್ಟು ಭಾಗಗಳನ್ನು ಗುಜರಿ ವಸ್ತುಗಳಿಂದಲೇ ನಿರ್ಮಿಸಿರುವುದು ವಿಶೇಷ.

‘ಗರುಡ’ ಬೈಕ್‌ನ ವೈಶಿಷ್ಟ್ಯಗಳೇನು?
ರಾಸ್ಪ್‌ಬೆರಿ ಪೈ ತಂತ್ರಜ್ಞಾನ: ಈ ಬೈಕ್‌ನಲ್ಲಿ ‘ರಾಸ್ಪ್‌ಬೆರಿ ಪೈ’ (Raspberry Pi) ಎಂಬ ಚಿಕ್ಕ ಕಂಪ್ಯೂಟರ್ ಅನ್ನು ಅಳವಡಿಸಲಾಗಿದ್ದು, ಇದು ಬೈಕ್‌ನ ಮೆದುಳಿನಂತೆ ಕೆಲಸ ಮಾಡುತ್ತದೆ.
1)ಧ್ವನಿ ನಿಯಂತ್ರಣ: ಚಾಲಕನ ಧ್ವನಿಯ ಆದೇಶದ ಮೇರೆಗೆ ಈ ಬೈಕ್ ವೇಗ ನಿಯಂತ್ರಿಸಬಲ್ಲದು ಮತ್ತು ನಿಲ್ಲಬಲ್ಲದು.
2)ಸ್ವಯಂಚಾಲಿತ ಬ್ರೇಕಿಂಗ್: ಬೈಕ್‌ನಲ್ಲಿ ಸೆನ್ಸರ್‌ಗಳನ್ನು ಅಳವಡಿಸಲಾಗಿದ್ದು, 12 ಅಡಿ ದೂರದಲ್ಲಿ ಬೇರೆ ವಾಹನ ಬಂದರೆ ತಾನಾಗಿಯೇ ವೇಗ ಕಡಿಮೆ ಮಾಡಿಕೊಳ್ಳುತ್ತದೆ. ಮೂರು ಅಡಿ ಅಂತರದಲ್ಲಿ ಅಡೆತಡೆ ಕಂಡುಬಂದರೆ ಬ್ರೇಕ್ ಹಾಕದಿದ್ದರೂ ತಾನಾಗಿಯೇ ನಿಂತುಬಿಡುತ್ತದೆ.
3) ವೈರ್‌ಲೆಸ್ ಚಾರ್ಜಿಂಗ್ ಮತ್ತು ಟಚ್ ಸ್ಕ್ರೀನ್: ಇದರಲ್ಲಿ ಜಿಪಿಎಸ್ ನ್ಯಾವಿಗೇಷನ್, ಫೋನ್ ಸಂಪರ್ಕ, ಮತ್ತು ಸಂಗೀತ ಹಾಕಲು ಟಚ್ ಸ್ಕ್ರೀನ್ ಡ್ಯಾಶ್‌ಬೋರ್ಡ್ ಇದೆ. ಜೊತೆಗೆ ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಯೂ ಇದೆ.
4) ಅದ್ಭುತ ಮೈಲೇಜ್: ಒಮ್ಮೆ ಚಾರ್ಜ್ ಮಾಡಿದರೆ ಎಕೋ ಮೋಡ್‌ನಲ್ಲಿ 220 ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ 160 ಕಿ.ಮೀ ವರೆಗೆ ಚಲಿಸುತ್ತದೆ. ಬ್ಯಾಟರಿ ಪೂರ್ತಿ ಚಾರ್ಜ್ ಆಗಲು ಕೇವಲ 2 ಗಂಟೆ ಸಾಕು.
5)ವೆಚ್ಚ: ಸುಮಾರು ಒಂದು ವರ್ಷದ ಶ್ರಮ ಮತ್ತು 1.8 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಬೈಕ್ ಸಿದ್ಧವಾಗಿದೆ.
ಭವಿಷ್ಯದಲ್ಲಿ ಚಾಲಕ ರಹಿತ ವಾಹನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಗುಜರಿ ವಸ್ತುಗಳಿಂದಲೂ ಅತ್ಯಾಧುನಿಕ ತಂತ್ರಜ್ಞಾನದ ವಾಹನ ನಿರ್ಮಿಸಬಹುದು ಎಂಬುದನ್ನು ಈ ವಿದ್ಯಾರ್ಥಿಗಳು ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ : ಸಹೋದ್ಯೋಗಿಗೆ ಲಿಫ್ಟ್ ಕೊಡುವ ನೆಪದಲ್ಲಿ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ | ಐಟಿ ಕಂಪನಿ ಸಿಇಒ ಸೇರಿ ಮೂವರು ಅರೆಸ್ಟ್



















