ತುಮಕೂರು: ಶಾಸಕ ರಾಜೇಂದ್ರ (MLC Rajendra) ಹತ್ಯೆ ಸುಪಾರಿ ಪ್ರಕರಣ ರಾಜಕೀಯ ವಲಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣ ಕ್ಷಣಕ್ಕೊಂದು ಟ್ವಿಸ್ಟ್ ಕೂಡ ಪಡೆಯುತ್ತಿದೆ. ಈಗ ಈ ಪ್ರಕರಣದ ಆಡಿಯೋ ಬಿಡುಗಡೆಯಾಗಿದ್ದು, ಪುಷ್ಪಾ ಎಂಬ ಮಹಿಳೆ ಮಾತನಾಡಿದ್ದಾರೆ ಎನ್ನಲಾಗಿದೆ. ಸದ್ಯ ಈ ಮಹಿಳೆಯನ್ನು ಪೊಲೀಸರು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪುಷ್ಪಾ ಟೀ ಅಂಗಡಿ ನಡೆಸುತ್ತಿದ್ದು, ರಾಜಕೀಯ ವ್ಯಕ್ತಿಯ ನಗ್ನ ವಿಡಿಯೋ ಇಟ್ಟಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಳು. ಆನಂತರ ಜೈಲುವಾಸ ಅನುಭವಿಸಿ ಹೊರ ಬಂದಿದ್ದಾಳೆ. ರೌಡಿಗಳೊಂದಿಗೆ ನಿಕಟ ಸಂಪರ್ಕದಲ್ಲಿ ಇದ್ದಾಳೆ ಎಂದು ಹೇಳಲಾಗುತ್ತಿದೆ. ಈಗ ಪುಷ್ಪಾ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ಕರ್ನಾಟಕ ನ್ಯೂಸ್ ಬೀಟ್ ಗೆ ಸಿಕ್ಕಿದೆ.
ಸಚಿವ ಕೆ.ಎನ್ ರಾಜಣ್ಣ ಪುತ್ರ ಹಾಗೂ ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಆರೋಪಿಗಳಾದ ಸೋಮ ಹಾಗೂ ಗುಂಡಾನನ್ನು ಪೊಲೀಸರು ಬಂಧಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಜೈಪುರದ ಸೋಮ ಎಂಬಾತನ ಆಪ್ತೆ ಪುಷ್ಪಾ, ರಾಜೇಂದ್ರ ಆಪ್ತ ರಾಕಿ ಜೊತೆ ಮಾತನಾಡಿದ್ದಾರೆ.
ಆರೋಪಿ ಸೋಮ ರಾಜೇಂದ್ರರನ್ನು ಹತ್ಯೆ ಮಾಡಲು ಸುಪಾರಿ ಪಡೆದಿರುವುದಾಗಿ ಪುಷ್ಪಾಳ ಬಳಿ ಹೇಳಿಕೊಂಡಿದ್ದಾನೆ. ಪುಷ್ಪಾ ಸುಪಾರಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದ್ದಳು. ಸೋಮನ ಜೊತೆಗಿದ್ದುಕೊಂಡೇ ಕೊಲೆ ಸಂಚಿನ ಮಾಹಿತಿ ಕಲೆಹಾಕಿದ್ದಳು. ಈ ವಿಷಯವನ್ನು ರಾಜೇಂದ್ರ ಅವರಿಗೆ ತಿಳಿಸಲು ಮುಂದಾಗಿದ್ದಳು ಎನ್ನಲಾಗಿದೆ. ಹೀಗಾಗಿ ರಾಕಿ ಜೊತೆ ಮಾತನಾಡಿದ್ದಾಳೆ. ರಾಜೇಂದ್ರ ಈ ಆಡಿಯೋ ಇಟ್ಟುಕೊಂಡು ತುಮಕೂರು ಎಸ್ಪಿ ಬಳಿ ದೂರು ದಾಖಲಿಸಿದ್ದರು. ಸದ್ಯ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.