ವಾಷಿಂಗ್ಟನ್: ಕಳೆದ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಸಿಲುಕಿರುವ ನಾಸಾ(NASA) ಗಗನಯಾತ್ರಿ ಸುನೀತಾ ವಿಲಿಯಮ್ಸ್(Sunita Williams) ಭೂಮಿಗೆ ಮರಳುವುದು ಮತ್ತೊಮ್ಮೆ ವಿಳಂಬವಾಗಿದೆ.
ಸ್ಪೇಸ್ಎಕ್ಸ್ ಸಂಸ್ಥೆಯು ತನ್ನ ಕ್ರ್ಯೂ-10 ಮಿಷನ್ ಉಡಾವಣೆಯನ್ನು ತಾಂತ್ರಿಕ ಕಾರಣಗಳಿಂದಾಗಿ ಸ್ಥಗಿತಗೊಳಿಸಿದೆ. ಕ್ರ್ಯೂ-10 ಮಿಷನ್ ಮೂಲಕ ಪ್ರಸ್ತುತ ಅಲ್ಲಿರುವ ಸಿಬ್ಬಂದಿಯನ್ನು ಬದಲಾಯಿಸಲು ಮತ್ತು ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಅವರನ್ನು ವಾಪಸ್ ಕರೆತರಲು ನಿರ್ಧರಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇದೇ ತಿಂಗಳಲ್ಲಿ ಸುನೀತಾ ಭೂಮಿಗೆ ವಾಪಸಾಗುತ್ತಿದ್ದರು. ಆದರೆ, ಸ್ಪೇಸ್ ಎಕ್ಸ್‌ನ ಫಾಲ್ಕನ್ 9 ರಾಕೆಟ್‌ಗೆ ಸಂಬಂಧಿಸಿದ ಗ್ರೌಂಡ್ ಸಪೋರ್ಟ್ ಕ್ಲಾಂಪ್ ಆರ್ಮ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ, ಈ ರಾಕೆಟ್ ಉಡಾವಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ನಾಸಾ ಘೋಷಿಸಿದೆ.
ತಾಂತ್ರಿಕ ಸಮಸ್ಯೆ ಪರಿಹಾರವಾಗಿ ಕ್ರ್ಯೂ-10 ಮಿಷನ್ ಶನಿವಾರ ಯಶಸ್ವಿಯಾಗಿ ಉಡಾವಣೆಯಾದರೆ, ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಮಾರ್ಚ್ 20 ರ ನಂತರ ಐಎಸ್ಎಸ್‌ನಿಂದ ಹೊರಡುವ ನಿರೀಕ್ಷೆಯಿದೆ.
ಕ್ರ್ಯೂ-10 ಮಿಷನ್ ನಾಸಾದ ಅನ್ನೆ ಮೆಕ್ಲೈನ್ ಮತ್ತು ನಿಕೋಲ್ ಅಯರ್ಸ್, ಜಾಕ್ಸಾದ ಟಕುಯಾ ಒನಿಶಿ ಮತ್ತು ರೋಸ್ ಕಾಸ್ಮೋಸ್‌ನ ಕಿರಿಲ್ ಪೆಸ್ಕೊವ್ ಸೇರಿದಂತೆ ಹೊಸ ಗಗನಯಾತ್ರಿಗಳ ತಂಡವನ್ನು ಐಎಸ್ಎಸ್‌ಗೆ ಕರೆತರಲಿದೆ.
ವಿಳಂಬದ ಹೊರತಾಗಿಯೂ, ಗಗನಯಾತ್ರಿಗಳ ಆರೋಗ್ಯ ಮತ್ತು ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ನಾಸಾ ಹೇಳಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿರುವ ಸಿಬ್ಬಂದಿ ತಮ್ಮ ಕೆಲಸವನ್ನು ಸುರಕ್ಷಿತವಾಗಿ ಮುಂದುವರಿಸಲು ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಹೊಂದಿದ್ದಾರೆ ಎಂದೂ ತಿಳಿಸಿದೆ.
9 ತಿಂಗಳ ಹಿಂದೆ ಬೋಯಿಂಗ್‌ನ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಸುನೀತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಪ್ರಯಾಣಿಸಿದ್ದರು. ಆರಂಭದಲ್ಲಿ ಕೇವಲ ಎಂಟು ದಿನಗಳ ಕಾಲ ಅಲ್ಲಿ ಉಳಿಯಲು ನಿರ್ಧರಿಸಲಾಗಿತ್ತು. ಆದರೆ, ನೌಕೆಯಲ್ಲಿ ದೋಷ ಕಂಡುಬಂದ ಕಾರಣ ಅವರು ವಾಪಸಾಗಲು ಸಾಧ್ಯವಾಗದೇ, ಐಎಸ್ಐಎಸ್ ನಲ್ಲೇ ಬಾಕಿಯಾಗಬೇಕಾಯಿತು. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ನಾಸಾ ಮತ್ತು ಸ್ಪೇಸ್ ಎಕ್ಸ್ ನಿರಂತರವಾಗಿ ಯತ್ನಿಸುತ್ತಿರುವಂತೆಯೇ, ಗಗನಯಾತ್ರಿಗಳ ಸುರಕ್ಷಿತ ಮರಳುವಿಕೆಗಾಗಿ ಜಗತ್ತು ಕಾಯುತ್ತಿದೆ.