ವಾಷಿಂಗ್ಟನ್: ಇಡೀ ಜಗತ್ತು 2025ರ ಹೊಸ ವರ್ಷವನ್ನು ಬರಮಾಡಿಕೊಂಡಿದೆ. ಕೇವಲ ಭೂಮಿಯ ಮೇಲೆ ಅಷ್ಟೇ ಅಲ್ಲ. ಬಾಹ್ಯಾಕಾಶದಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ನಡೆದಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದಲ್ಲಿರುವ ಗಗನ ಯಾತ್ರಿಗಳು ಶೂನ್ಯ ಗುರುತ್ವ ಬಾಹ್ಯಾಕಾಶದಲ್ಲಿ ಹೊಸ ವರ್ಷ ಬರಮಾಡಿಕೊಂಡಿದ್ದಾರೆ. ತಾಂತ್ರಿಕ ತೊಂದರೆಯಿಂದಾಗಿ ದೀರ್ಘ ಕಾಲದಿಂದಾಗಿ ಐಎಸ್‌ಎಸ್ ನಲ್ಲಿ ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲೇ ಉಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಬಾಹ್ಯಾಕಾಶದಲ್ಲೇ 2025ರ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಸುನೀತಾ ವಿಲಿಯಮ್ಸ್ ಹಾಗೂ ತಂಡ ಒಂದೇ ದಿನ ಬರೋಬ್ಬರಿ 16 ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತ ಕಣ್ತುಂಬಿಕೊಳ್ಳುತ್ತಿರುವುದು ವಿಶೇಷ.
ಈ ಕುರಿತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಅಧಿಕೃತ ‘ಎಕ್ಸ್’ ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಐಎಸ್ ಎಸ್ ಭೂಮಿಯನ್ನು ನಿರತಂತರವಾಗಿ ಪ್ರದಕ್ಷಿಣೆ ಹಾಕುವುದರಿಂದ, ಗಗನಯಾತ್ರಿಗಳು ಒಂದೇ ದಿನದಲ್ಲಿ ಒಟ್ಟು 16 ಬಾರಿ ಸೂರ್ಯೋದಯ ಹಾಗೂ 16 ಬಾರಿ ಸೂರ್ಯಾಸ್ತ ನೋಡಲಿದ್ದಾರೆ ಎಂದು ಹೇಳಲಾಗಿದೆ.
Exp 72 ಸಿಬ್ಬಂದಿ ಬಾಹ್ಯಾಕಾಶದಲ್ಲಿ 16 ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ನೋಡುತ್ತಾರೆ. ಕಳೆದ ವರ್ಷ ಭೂಕಕ್ಷೆಯಿಂದ ಕ್ಲಿಕ್ಕಿಸಲಾದ ವಿಭಿನ್ನ ಸೂರ್ಯೋದಯ ಮತ್ತು ಸೂರ್ಯಾಸ್ತದ ಚಿತ್ರಗಳನ್ನು ಇಲ್ಲಿ ನೋಡಬಹುದಾಗಿದೆ ಎಂದು ಟ್ವೀಟ್ ಮಾಡಲಾಗಿದೆ.