ಅಬುಧಾಬಿ: ಏಷ್ಯಾಕಪ್ ಟಿ20 ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನದ ಆಲ್‌ರೌಂಡರ್ ಅಜ್ಮತುಲ್ಲಾ ಒಮರ್ಜಾಯ್ (Azmatullah Omarzai) ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅವರು, ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ದಾಖಲೆಯನ್ನು ಮುರಿದುಹಾಕಿದ್ದಾರೆ.
ಮಂಗಳವಾರ ಹಾಂಕಾಂಗ್ ವಿರುದ್ಧ ನಡೆದ ಪಂದ್ಯದಲ್ಲಿ ಒಮರ್ಜಾಯ್ ಈ ಅಮೋಘ ಸಾಧನೆ ಮಾಡಿದರು. ಈ ಮೂಲಕ ಟಿ20 ಏಷ್ಯಾಕಪ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು, 2022ರ ಏಷ್ಯಾಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರು ಹಾಂಕಾಂಗ್ ವಿರುದ್ಧವೇ 22 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.
ಪಂದ್ಯದ ವಿವರ:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ, ಆರಂಭದಲ್ಲಿ ನಿಧಾನಗತಿಯ ಆಟಕ್ಕೆ ಮೊರೆಹೋಯಿತು. ಆದರೆ, ಡೆತ್ ಓವರ್‌ಗಳಲ್ಲಿ ಅಕ್ಷರಶಃ ರನ್‌ಗಳ ಮಳೆ ಸುರಿಸಿತು. ಮೊದಲ 15 ಓವರ್‌ಗಳಲ್ಲಿ ಕೇವಲ 110 ರನ್ ಗಳಿಸಿದ್ದ ತಂಡ, ಅಂತಿಮ 5 ಓವರ್‌ಗಳಲ್ಲಿ ಬರೋಬ್ಬರಿ 78 ರನ್ ಚಚ್ಚಿತು.
ಕೊನೆಯಲ್ಲಿ ಅಬ್ಬರಿಸಿದ ಅಜ್ಮತುಲ್ಲಾ ಒಮರ್ಜಾಯ್ ಕೇವಲ 21 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 53 ರನ್ ಸಿಡಿಸಿ ಔಟಾದರು. ಆರಂಭಿಕ ಆಟಗಾರ ಸೆದಿಕುಲ್ಲಾ ಅಟಲ್ ಅಜೇಯ 73 ರನ್ ಗಳಿಸಿದರೆ, ಮೊಹಮ್ಮದ್ ನಬಿ 33 ರನ್‌ಗಳ ಕೊಡುಗೆ ನೀಡಿದರು. ಇದರ ಪರಿಣಾಮವಾಗಿ ಅಫ್ಘಾನಿಸ್ತಾನ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 188 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಈ ಬೃಹತ್ ಗುರಿ ಬೆನ್ನತ್ತಿದ ಹಾಂಕಾಂಗ್, ಕೇವಲ 22 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಅಂತಿಮವಾಗಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಲಷ್ಟೇ ಶಕ್ತವಾಗಿ, 94 ರನ್‌ಗಳ ಹೀನಾಯ ಸೋಲು ಅನುಭವಿಸಿತು.



















