ಕಾರವಾರ: ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರ ಸದಾಶಿವಗಡದಲ್ಲಿರುವ ಮನೆ ಮೇಲೆ ಇಂದು (ಬುಧವಾರ) ಬೆಳಗ್ಗೆ ದಿಢೀರ್ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೇಲೆಕೇರಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ತಪಾಸಣೆ ನಡೆದಿದೆ ಎನ್ನಲಾಗಿದೆ. 6 ಕಾರುಗಳಲ್ಲಿ ಬಂದಿರುವ 24 ಕ್ಕೂ ಹೆಚ್ಚು ಇ.ಡಿ ಅಧಿಕಾರಿಗಳು ಸತೀಶ್ ಸೈಲ್ ನಿವಾಸದಲ್ಲಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಶಾಸಕ ಸತೀಶ್ ಸೈಲ್ ಎಂಸಿಎ ಅಧ್ಯಕ್ಷರಾಗಿದ್ದರು. ಅಧಿವೇಶನದ ಹಿನ್ನೆಲೆಯಲ್ಲಿ ಶಾಸಕ ಸತೀಶ್ ಸೈಲ್ ಬೆಂಗಳೂರಿಗೆ ತೆರಳಿದ್ದಾರೆ. ಶಾಸಕರ ನಿವಾಸದೊಳಗೆ ಹೊರಗಿನವರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಮನೆಯ ಮುಂಭಾದಲ್ಲಿ ಸಿಐಎಸ್ಎಫ್ ಕಾವಲು ಪಡೆಯನ್ನು ನಿಯೋಜಿಸಲಾಗಿದೆ.



















