ಟ್ಯೂಷನ್ ಟೀಚರ್ ಒಬ್ಬಾತ ಪಾಠ ಹೇಳುವುದನ್ನು ಬಿಟ್ಟು ಪ್ರೀತಿ- ಪ್ರೇಮದ ಪಾಠ ಹೇಳಿ, ವಿದ್ಯಾರ್ಥಿನಿಯ ತಲೆಕೆಡಿಸಿ ಕಿಡ್ನಾಪ್ ಮಾಡಿರುವ ಘಟನೆಯೊಂದು ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಪುರ ಮೂಲದ ಬಾಲಕಿಯ ತಂದೆ ಜೆ.ಪಿ. ನಗರ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿದ್ದಾರೆ. ಕನಕಪುರ ಮೂಲದ ಅಭಿಷೇಕ್ ಎಂಬ ಟ್ಯೂಷನ್ ಟೀಚರ್, ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿದ್ದಾನೆ ಎನ್ನಲಾಗಿದೆ.
ವಿದ್ಯಾರ್ಥಿನಿ ನ. 23ರಂದು ಆರೋಪಿತನ ಟ್ಯೂಷನ್ ಗೆ ಬಂದಿದ್ದಾರೆ. ಆದರೆ, ಟ್ಯೂಷನ್ ಮುಗಿದು ರಾತ್ರಿಯಾದರೂ ವಿದ್ಯಾರ್ಥಿನಿ ಮನೆಗೆ ಬಂದಿಲ್ಲ. ಹೀಗಾಗಿ ಗಾಬರಿಗೊಂಡ ಪಾಲಕರು ರಾತ್ರಿ ಟ್ಯೂಷನ್ ಸೆಂಟರ್ ಬಳಿ ಹೋದಾಗ ಬಾಲಕಿಯನ್ನು ಕರೆದೊಯ್ದಿರುವುದು ಪತ್ತೆಯಾಗಿದೆ. ಬಾಲಕಿಯನ್ನು ಕರೆದೊಯ್ಯುವ ಸಂದರ್ಭದಲ್ಲಿ ಮನೆಯ ರೂಂನಲ್ಲೇ ಮೊಬೈಲ್ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ.

40 ದಿನಗಳಾದರೂ ವಿದ್ಯಾರ್ಥಿನಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಬೆಂಗಳೂರು, ರಾಮನಗರ, ಕನಕಪುರ ಸೇರಿದಂತೆ ಹಲವೆಡೆ ಈಗಾಗಲೇ ಆರೋಪಿಗಾಗಿ ಹುಡುಕಾಟ ನಡೆಸಲಾಗಿದೆ. ಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ಹೀಗಾಗಿ ಪೊಲೀಸರು ಆರೋಪಿಯ ಸುಳಿವು ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಪೊಲೀಸ್ ಪ್ರಕಟಣೆ ಹೊರಡಿಸಿದ್ದಾರೆ. ಅಲ್ಲದೇ, ಆರೋಪಿ ಪತ್ತೆಯಾಗದ ಹಿನ್ನೆಲೆಯಲ್ಲಿ ಲುಕ್ ಔಟ್ ನೋಟಿಸ್ ಕೂಡ ಹೊರಡಿಸಿದ್ದಾರೆ. ಇನ್ನೊಂದೆಡೆ ವಿದ್ಯಾರ್ಥಿನಿಯ ಕುಟುಂಬಸ್ಥರು ಕಣ್ಣಿರಿನಲ್ಲಿ ಕೈ ತೊಳೆಯುತ್ತಿದ್ದಾರೆ.