ಬೆಂಗಳೂರು: ವಿಷ ಆಹಾರ ಸೇವಿಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡಿದ್ದಾರೆ.
ಜಿಲ್ಲೆಯ ಮಳವಳ್ಳಿ (Malavalli) ತಾಲ್ಲೂಕಿನಲ್ಲಿ ಟಿ.ಕಾಗೇಪುರ ಗ್ರಾಮದ ಖಾಸಗಿ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವನೆಯಿಂದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿ, ಹಲವು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.
ಈ ಘಟನೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮಕ್ಕಳ ಆರೋಗ್ಯದ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಮಳವಳ್ಳಿ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಆಹಾರದ ಬಗ್ಗೆ ಜಾಗ್ರತೆಯಿಂದ ಇರಬೇಕು. ಮಕ್ಕಳಿಗೆ ನೀಡಲಾಗುವ ಆಹಾರದ ಬಗ್ಗೆ ಕಟ್ಟೆಚ್ಚರ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಸರ್ಕಾರಿ ಅಥವಾ ಖಾಸಗಿ ವಸತಿ ಶಾಲೆಗಳಲ್ಲಿ ಆಹಾರದ ಬಗ್ಗೆ ಅಧಿಕಾರಿಗಳು, ಸಂಬಂಧಪಟ್ಟ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ಕಠಿಣ ನಿಗಾ ಇಡಬೇಕು ಎಂದು ತಹಶೀಲ್ದಾರ್ ಗೆ ತಾಕೀತು ಮಾಡಿದ್ದಾರೆ.