ಹಾವೇರಿ: ಕಾಂಗ್ರೆಸ್ ಸರ್ಕಾರ ಕಿತ್ತು ಹಾಕುವವರೆಗೂ ನಿದ್ದೆ ಮಾಡುವುದಿಲ್ಲ ಎಂದಿರುವ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದು, ಪ್ರಶ್ನೆ ಮುಂದಿಟ್ಟಿದ್ದಾರೆ.
ಶಿಗ್ಗಾಂವಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ಅವರು, 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ‘ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ದೇಶ ಬಿಡುತ್ತೇನೆ’ ಎಂದು ಇದೇ ದೇವೇಗೌಡರು ಗುಡುಗಿದ್ದರು. ಆದರೆ, ಈಗ ಅವರೊಂದಿಗೆ ಸೇರಿ ರಾಜ್ಯ ಕಾಂಗ್ರೆಸ್ ಕಿತ್ತು ಹಾಕುವ ಮಾತುಗಳನ್ನು ಆಡುತ್ತಿದ್ದಾರೆ. ಇವರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಹಾಗೂ ದೇವೇಗೌಡರು ಚನ್ನಪಟ್ಟಣದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಅತ್ತ ಹಾಸನದಲ್ಲಿ ಪ್ರಜ್ವಲರ್ ರೇವಣ್ಣರಿಂದ ಹತ್ತಾರು ಮಹಿಳೆಯರು ಕಣ್ಣೀರಿಡುತ್ತಿದ್ದಾರೆ. ನೀವಿಬ್ಬರು ಅಲ್ಲಿ ಹೋಗಿ ಕಣ್ಣೀರು ಹಾಕಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ದೇವೇಗೌಡರಿಗೆ ಯಾರು ಏನಾದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಕುಟುಂಬ ಅಧಿಕಾರದಲ್ಲಿರಬೇಕು. ಈಗ ಮೊಮ್ಮಗನನ್ನು ಗೆಲ್ಲಿಸಲು ದೊಡ್ಡ ದೊಡ್ಡ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ನಿಮಗೆ 92 ವರ್ಷ ವಯಸ್ಸಾಗಿದೆ. ನೀವು ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು. ಆದರೆ, ಮೊಮ್ಮಗನ ಗೆಲುವಿಗಾಗಿ ಸುಳ್ಳು ಕಣ್ಣೀರು ಹಾಕುತ್ತಿದ್ದೀರಿ. ಇದೆಲ್ಲ ನಿಮಗೆ ಬೇಕಾ ಎಂದು ಗುಡುಗಿದ್ದಾರೆ.