ನವದೆಹಲಿ: ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ ಹಲವರ ಸಾವಿಗೆ ಕಾರಣವಾದ ಪಾಕಿಸ್ತಾನ ಈಗ ಸಿಂಧೂ ನದಿ ಒಪ್ಪಂದ ಅಮಾನತು ಮಾಡಿರುವುದಕ್ಕೆ ಭಾರತವನ್ನು ದೂಷಿಸುತ್ತಿದೆ. ಇಲ್ಲಿ ಒಪ್ಪಂದವನ್ನು ಮುರಿದವರು ನಾವಲ್ಲ, ಭಯೋತ್ಪಾದನೆಯನ್ನು ಬೆಂಬಲಿಸುವ ಮೂಲಕ ಒಪ್ಪಂದ ಮುರಿದಿದ್ದು ಪಾಕಿಸ್ತಾನ ಎಂದು ಕೇಂದ್ರ ಪರಿಸರ ಖಾತೆ ಸಹಾಯಕ ಸಚಿವ ಕೀರ್ತಿ ವರ್ಧನ್ ಸಿಂಗ್ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ.
ತಜಿಕಿಸ್ತಾನದ ದುಶಾನ್ಬೆಯಲ್ಲಿ ನಡೆದ ನೀರ್ಗಲ್ಲು ಸಂರಕ್ಷಣೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಮೊದಲ ಸಮ್ಮೇಳನದಲ್ಲಿ ಭಾರತವು ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಅವರ ಸಿಂಧೂ ನದಿ ಒಪ್ಪಂದಕ್ಕೆ ಸಂಬಂಧಿಸಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ಷರೀಫ್ ಅವರು ಭಾರತದ ಏಕಪಕ್ಷೀಯ ನಿರ್ಧಾರವನ್ನು “ನೀರಿನ ಶಸ್ತ್ರೀಕರಣ” ಎಂದು ಟೀಕಿಸಿದ್ದರು. ಅದಕ್ಕೆ ತಿರುಗೇಟು ನೀಡಿರುವ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು, ಪಾಕಿಸ್ತಾನವೇ ಗಡಿಯಾಚೆಗಿನ ಭಯೋತ್ಪಾದನೆಯ ಮೂಲಕ ಒಪ್ಪಂದವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಏಪ್ರಿಲ್ 22, 2025ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಕೊಲ್ಲಲ್ಪಟ್ಟ ನಂತರ ಭಾರತವು 1960ರ ಸಿಂಧೂ ನದಿ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ತಾಜಿಕಿಸ್ತಾನ್ ಸಮ್ಮೇಳನದಲ್ಲಿ ಶೆಹಬಾಜ್ ಷರೀಫ್, ಭಾರತದ ಈ ಕ್ರಮವನ್ನು “ಕಾನೂನುಬಾಹಿರ” ಮತ್ತು “ದುರದ್ದೇಶಪೂರಿತ” ಎಂದು ಕರೆದಿದ್ದು, ಇದು ಲಕ್ಷಾಂತರ ಜನರ ಜೀವನವನ್ನು ಅಪಾಯಕ್ಕೆ ಒಡ್ಡುತ್ತದೆ ಎಂದು ಆಕ್ಷೇಪಿಸಿದರು. ಆದರೆ, ಕಿರ್ತಿ ವರ್ಧನ್ ಸಿಂಗ್ ಅವರು, ಒಪ್ಪಂದದ ಮುಂದುವರಿಕೆಗೆ ಗಡಿಯಾಚೆಗಿನ ಭಯೋತ್ಪಾದನೆಯೇ ಮುಖ್ಯ ಅಡ್ಡಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ. ತಾಂತ್ರಿಕ, ಜನಸಂಖ್ಯಾ, ಹವಾಮಾನ ಬದಲಾವಣೆ ಮತ್ತು ಭಯೋತ್ಪಾದನೆಯಂತಹ ಕಾರಣಗಳಿಂದ ಒಪ್ಪಂದದ ಮರುಮೌಲ್ಯಮಾಪನದ ಅಗತ್ಯವಿದೆ ಎಂದು ಅವರು ವಾದಿಸಿದ್ದಾರೆ. ಅಲ್ಲದೇ, ಇಂತಹ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವ ಪಾಕಿಸ್ತಾನದ ಪ್ರಯತ್ನ ನಾಚಿಕೆಗೇಡಿನದ್ದು. ಸಿಂಧೂ ನದಿ ಒಪ್ಪಂದದಂತಹ ವಿಚಾರ ಈ ಶೃಂಗದ ವ್ಯಾಪ್ತಿಗೆ ಬರುವುದಿಲ್ಲ. ಇಂತಹ ಪ್ರಯತ್ನವನ್ನು ನಾವು ಖಂಡಿಸುತ್ತೇವೆ ಎಂದು ಕೀರ್ತಿ ವರ್ಧನ್ ಹೇಳಿದ್ದಾರೆ. ಸದ್ಭಾವನೆ ಮತ್ತು ಸ್ನೇಹದಿಂದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸಿಂಧೂ ನದಿ ಒಪ್ಪಂದದಲ್ಲೇ ಉಲ್ಲೇಖಿಸಲಾಗಿದೆ. ಆದರೆ, ಆ ಸ್ನೇಹವನ್ನಾಗಲೀ, ಸದ್ಭಾವನೆಯನ್ನಾಗಲೀ ಪಾಕಿಸ್ತಾನ ಉಳಿಸಿಕೊಂಡಿಲ್ಲ ಎಂದು ಹೇಳಿರುವ ಸಚಿವ ಸಿಂಗ್, ಗಡಿಯಾಚೆಗಿನ ಭಯೋತ್ಪಾದನೆ ಅಂತ್ಯಗೊಳ್ಳುವವರೆಗೂ ಒಪ್ಪಂದ ಅಮಾನತು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.



















