ಬೆಂಗಳೂರು: ದೇವಿಯ ತೇರು ಎಳೆಯುತ್ತಿರುವ ವೇಳೆ ತೇರಿನ ಮೇಲೆ ಹಾಗೂ ಓಂ ಶಕ್ತಿ ಮಾಲಾಧಾರಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಿರುವ ಘಟನೆ ಬೆಂಗಳೂರಿನ ಜೆಜೆಆರ್ ನಗರದ ವಿಎಸ್ ಗಾರ್ಡನ್‌ನ ಓಂ ಶಕ್ತಿ ದೇವಸ್ಥಾನದ ಬಳಿ ನಡೆದಿದೆ.
ಮೂವರಿಗೆ ಕಲ್ಲು ಬಿದ್ದಿರುವ ಬಗ್ಗೆ ಆರೋಪ ಕೇಳಿಬಂದಿದೆ. ಕಲ್ಲು ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಈ ವೇಳೆ ಮಗು, ಯುವತಿ, ವಯಸ್ಕ ಮಹಿಳೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಕಿಡಿಗೇಡಿಗಳನ್ನ ಬಂಧಿಸುವಂತೆ ಬಿಗಿಪಟ್ಟು ಹಿಡಿಯಲಾಗಿದೆ.
ತೇರಿನ ಮೇಲೆ ಅನ್ಯ ಕೋಮಿನವರಿಂದ ಕಲ್ಲು ಎಸೆದ ಆರೋಪ ಹೊರಿಸಲಾಗಿದೆ. ಓಂ ಶಕ್ತಿ ಮಾಲೆ ಧರಿಸಿದ್ದ ಮಗುವಿಗೆ ಕಲ್ಲೇಟು ಬಿದ್ದಿದೆ. ಘಟನೆ ಬಳಿಕ ಓಂ ಶಕ್ತಿ ಮಾಲಾಧಾರಿಗಳು ಜೆಜೆಆರ್ ನಗರ ಠಾಣೆಯ ಮುಂದೆ ಜಮಾಯಿಸಿ ಕ್ರಮಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಕಲ್ಲು ಎಸೆದ ಕಿಡಿಗೇಡಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಈ ಘಟನಾ ಸಂಬಂಧ ಓಂ ಶಕ್ತಿ ಮಾಲಾಧಾರಿಗಳ ಅಧ್ಯಕ್ಷ ಶಶಿಕುಮಾರ್ ದೂರಿನನ್ವಯ ಎಫ್ಐಆರ್ ದಾಖಲಾಗಿದೆ. ಪೊಲೀಸ್ ಸ್ಟೇಷನ್ ಬಳಿ ಪ್ರತಿಭಟನಾಕಾರರನ್ನು ಮನವೊಲಿಸಲು ಪೊಲೀಸರು ಹರಸಾಹಸ ಪಟ್ಟರು. ಆರೋಪಿಗಳನ್ನು ಬಂಧಿಸುವ ಭರವಸೆ ಕೊಟ್ಟು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ಜನರಿಗೆ ಮತ್ತೊಂದು ಶಾಕ್ | ಪೇ & ಪಾರ್ಕಿಂಗ್ ರೂಲ್ಸ್ ಜಾರಿಗೆ ತರಲು GBA ಸಿದ್ಧತೆ!



















