ಸಿಡ್ನಿ: ಆಸ್ಟ್ರೇಲಿಯಾದ ತಾರಾ ಬ್ಯಾಟರ್ ಸ್ಟೀವ್ ಸ್ಮಿತ್ ಬಿಗ್‌ಬಾಶ್ ಲೀಗ್ (BBL) 2025–26ರ ಆವೃತ್ತಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಶುಕ್ರವಾರ (ಜ.16) ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (SCG) ನಡೆದ ಸಿಡ್ನಿ ಥಂಡರ್ ವಿರುದ್ಧದ ಪಂದ್ಯದಲ್ಲಿ ಕೇವಲ 41 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಐತಿಹಾಸಿಕ ಇನ್ನಿಂಗ್ಸ್ ಕಟ್ಟಿದ್ದಾರೆ.
ಸಿಡ್ನಿ ಸಿಕ್ಸರ್ಸ್ ತಂಡದ ನಾಯಕರಾಗಿರುವ ಸ್ಮಿತ್, ಈ ಸ್ಫೋಟಕ ಶತಕದ ಮೂಲಕ ಟೂರ್ನಿಯ ಇತಿಹಾಸದಲ್ಲಿ ಜಂಟಿ ಎರಡನೇ ವೇಗದ ಶತಕ ದಾಖಲಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. 2024ರಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಜೋಶ್ ಬ್ರೌನ್ ಕೂಡ 41 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಕ್ರೇಗ್ ಸಿಮನ್ಸ್ ಮತ್ತು ಮಿಚೆಲ್ ಓವನ್ (39 ಎಸೆತ) ಮಾತ್ರ ಸ್ಮಿತ್‌ಗಿಂತ ಮುಂದಿದ್ದಾರೆ.
107 ಮೀಟರ್ ದೈತ್ಯ ಸಿಕ್ಸರ್!
ಸ್ಮಿತ್ ಅವರ ಇನ್ನಿಂಗ್ಸ್‌ನ ಪ್ರಮುಖ ಆಕರ್ಷಣೆ ಎಂದರೆ ನಾಥನ್ ಮೆಕ್‌ಆಂಡ್ರ್ಯೂ ಅವರ ಬೌಲಿಂಗ್‌ನಲ್ಲಿ ಸಿಡಿಸಿದ 107 ಮೀಟರ್‌ಗಳ ದೈತ್ಯ ಸಿಕ್ಸರ್. ನಾಲ್ಕನೇ ಓವರ್‌ನಲ್ಲಿ ಸ್ಮಿತ್ ಚೆಂಡನ್ನು ಮಿಡ್-ವಿಕೆಟ್ ಮೇಲಿಂದ ಮೈದಾನದ ಹೊರಗೆ ಅಟ್ಟುವ ಮೂಲಕ ತಮ್ಮ ಬ್ಯಾಟಿಂಗ್ ಪವರ್ ಪ್ರದರ್ಶಿಸಿದರು. ಅಂತಿಮವಾಗಿ 42 ಎಸೆತಗಳಲ್ಲಿ 100 ರನ್ ಗಳಿಸಿದ ಸ್ಮಿತ್, ತನ್ವೀರ್ ಸಂಘ ಅವರ ಬೌಲಿಂಗ್‌ನಲ್ಲಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 9 ಭರ್ಜರಿ ಸಿಕ್ಸರ್‌ಗಳಿದ್ದವು.
ಇದು ಸಿಡ್ನಿ ಸಿಕ್ಸರ್ಸ್ ಪರ ದಾಖಲಾದ ಅತ್ಯಂತ ವೇಗದ ಶತಕವಾಗಿದೆ. ಈ ಹಿಂದೆ 2023ರಲ್ಲಿ ಇದೇ ಎದುರಾಳಿ (ಸಿಡ್ನಿ ಥಂಡರ್) ವಿರುದ್ಧ ಸ್ಮಿತ್ 56 ಎಸೆತಗಳಲ್ಲಿ ಶತಕ ಬಾರಿಸಿದ್ದರು, ಈಗ ತಮ್ಮದೇ ದಾಖಲೆಯನ್ನು ಅವರು ಮುರಿದಿದ್ದಾರೆ.
ಒಂದೇ ಓವರ್‌ನಲ್ಲಿ 32 ರನ್ ಲೂಟಿ!
ಪಂದ್ಯದ 12ನೇ ಓವರ್‌ನಲ್ಲಿ ರಯಾನ್ ಹ್ಯಾಡ್ಲಿ ಬೌಲಿಂಗ್‌ಗೆ ಸ್ಮಿತ್ ಮುಗಿಬಿದ್ದರು. ಈ ಓವರ್‌ನಲ್ಲಿ ಬರೋಬ್ಬರಿ 32 ರನ್ ಕೊಳ್ಳೆಹೊಡೆಯುವ ಮೂಲಕ ಬಿಬಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ಎಂಬ ಕುಖ್ಯಾತಿಗೆ ಹ್ಯಾಡ್ಲಿ ಗುರಿಯಾದರು. ಹ್ಯಾಟ್ರಿಕ್ ಸಿಕ್ಸರ್‌ಗಳ ಮೂಲಕ ಬೌಲರ್‌ಗೆ ನಿದ್ದೆಗೆಡಿಸಿದ ಸ್ಮಿತ್, ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ವಾರ್ನರ್ ಶತಕ ವ್ಯರ್ಥ, ಸಿಕ್ಸರ್ಸ್ ಗೆಲುವು
ಮೊದಲು ಬ್ಯಾಟ್ ಮಾಡಿದ್ದ ಸಿಡ್ನಿ ಥಂಡರ್ ಪರ ಡೇವಿಡ್ ವಾರ್ನರ್ 65 ಎಸೆತಗಳಲ್ಲಿ 110 ರನ್ ಸಿಡಿಸಿದ್ದರು. ಆದರೆ, ಸ್ಮಿತ್ ಅವರ ಅಬ್ಬರದ ಎದುರು ವಾರ್ನರ್ ಶತಕ ಮಂಕಾಯಿತು.
190 ರನ್‌ಗಳ ಗುರಿ ಬೆನ್ನತ್ತಿದ ಸಿಕ್ಸರ್ಸ್, ಸ್ಮಿತ್ ಅವರ ಸಾಹಸದಿಂದ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಸ್ಮಿತ್‌ಗೆ ಸಾಥ್ ನೀಡಿದ ಬಾಬರ್ ಆಜಮ್ 47 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಅಂತಿಮವಾಗಿ ಲಾಕ್ಲಾನ್ ಶಾ ಮತ್ತು ಜಾಕ್ ಎಡ್ವರ್ಡ್ಸ್ ಅವರ ಸಮಯೋಚಿತ ಆಟದಿಂದ ಸಿಕ್ಸರ್ಸ್ ತಂಡ 16 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.
ಇದನ್ನೂ ಓದಿ: ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ಮೇಜರ್ ಸರ್ಜರಿ | ಶ್ರೇಯಸ್ ಅಯ್ಯರ್ ಕಂಬ್ಯಾಕ್, ವಾಷಿಂಗ್ಟನ್ ಸುಂದರ್ ಔಟ್


















