ಬೆಂಗಳೂರು: ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ ಕ್ರಕ್ಸ್- ಕರ್ನಾಟಕ ವತಿಯಿಂದ ರಾಜ್ಯಮಟ್ಟದ ಖಾಸಗಿ ಶಾಲಾ ಶಿಕ್ಷಕರ ದಿನಾಚರಣೆ ಹಾಗೂ ಅತ್ಯುತ್ತಮ ಖಾಸಗಿ ಶಾಲಾ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಈ ಕಾರ್ಯಕ್ರಮವನ್ನು” ವಿಭುಧನ್ – 2024 ” ಹೆಸರಿನಲ್ಲಿ ಬೆಂಗಳೂರಿನ ಜ್ಞಾನಭಾರತಿ ಆವರಣದ ಪ್ರೊಫೆಸರ್ ಕೆ. ವೆಂಕಟಗಿರಿಗೌಡ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಖಾಸಗಿ ಶಾಲಾ ಶಿಕ್ಷಕರಿಗೆ ಸುಮಾರು 2500 ಆಹಾರದ ಕಿಟ್ ಗಳನ್ನು ಹಂಚಿಕೆ ಮಾಡಲಾಯಿತು.

ಶಿಕ್ಷಣ ತಜ್ಞ, ಎಂಇಎಸ್ ಶಿಕ್ಷಣ ಸಮೂಹ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಎಚ್.ಎಸ್. ಗಣೇಶ್ ಭಟ್ಟ ಮಾತನಾಡಿ, ಸಮಾಜದ ಉನ್ನತಿಗೆ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಹೀಗಾಗಿ ಶಿಕ್ಷಕರು ತಮ್ಮ ಕಾರ್ಯಗಳನ್ನು ಪ್ರಮಾಣಿಕವಾಗಿ ಮಾಡಬೇಕು. ಖಾಸಗಿ ಶಾಲೆಯ ಶಿಕ್ಷಕರು ತಮ್ಮ ಸ್ಥಾನ-ಮಾನ, ಪ್ರತಿಷ್ಠೆಯನ್ನು ಕಾಪಾಡಿಕೊಂಡು ನಡೆಯಬೇಕು ಎಂದು ಹೇಳಿದರು.
ನಾಲೆಡ್ಜ್ ಪಬ್ಲಿಕೇಷನ್ ನ ಸಂಸ್ಥಾಪಕ ಬಿ.ಎನ್. ಸುನೀಲ್ ಮಾತನಾಡಿ, ಶಿಕ್ಷಕರು ಹೊಸ ಹೊಸ ತಂತ್ರಜ್ಞಾನಗಳನ್ನು ಮೈ ಗೂಡಿಸಿಕೊಳ್ಳಬೇಕು. ಶಿಕ್ಷಣದ ಸವಾಲುಗಳನ್ನು ಧೈರ್ಯವಾಗಿ ಎದುರಿಸಬೇಕು ಎಂದು ಹೇಳಿದರು.
ನ್ಯಾಕ್ ಸಲಹೆಗಾರರಾದ ಡಾ. ಸುಜಾತ ಪಿ ಶಾನಭಾಗ್, ಪ್ರೊ. ಅನಿಲ್ ಕುಮಾರ್ ಜೋಶಿ, ಖಾಸಗಿ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸುರೇಶ್ ಎಸ್ ಗೊಲ್ಲ, ರಾಜ್ಯ ಉಪಾಧ್ಯಕ್ಷ ಪ್ರಮೀಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿಧಿ ಕೋಡಿಹಳ್ಳಿ ಸೇರಿದಂತೆ ಹಲವರು ಇದ್ದರು.

ಕಾರ್ಯಕ್ರಮದಲ್ಲಿ ರಾಜ್ಯದ ನಾಲ್ಕು ವಿಭಾಗಗಳಿಗೂ ತಲಾ ಮೂರರಂತೆ ಮತ್ತು ಬೆಂಗಳೂರು ನಗರಕ್ಕೆ ಮೂರು ಪ್ರಶಸ್ತಿಗಳಂತೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಳಗಾವಿ ವಿಭಾಗದಿಂದ ಶಶಾಂಕ್ ಹೆಗಡೆ, ಮುನಿರಾಬಾನ್ ಖಾನ್, ಮಲ್ಲಿಕಾರ್ಜುನ ಮಾನೆ, ಕಲಬುರಗಿ ವಿಭಾಗದಿಂದ ಎಚ್ ರವಿಕುಮಾರ್, ನೀಲಕಂಠಪ್ಪ, ಚಂದ್ರಶೇಖರ ತುಮರ ಗುಡ್ಡಿ, ಮೈಸೂರು ವಿಭಾಗದಿಂದ ನಂದೀಶ್ ಬಿ, ಸೀಮಾ ಕಾಮತ್ ಭುವನೇಂದ್ರ, ಗಣೇಶ್ ಪ್ರಸಾದ್, ಬೆಂಗಳೂರು ವಿಭಾಗದಿಂದ ಮುನೇಗೌಡ, ಮಧು ಆರ್, ಜಾನಕಿ ಬಾಯಿ ನಾವಳ್ಳಿ, ಬೆಂಗಳೂರು ನಗರದಿಂದ ಭೂಷಣ್ ಎನ್ , ಸ್ಟೆಲ್ಲಾ ದೀಪ್ತಿ, ಸಿದ್ದರಾಜಯ್ಯ ಪ್ರಶಸ್ತಿ ಪಡೆದರು.
ಪಠ್ಯೇತರ ಚಟುವಟಿಕೆಗಳಾದ ಯೋಗ, ಯಕ್ಷಗಾನ, ನಾಟಕ, ಚಿತ್ರಕಲೆ ಸೇರಿದಂತೆ ಹಲವು ವಿಭಾಗಗಳಲ್ಲೂ ಪ್ರಶಸ್ತಿ ನೀಡಲಾಯಿತು. ಯುಗಶ್ರೀ, ಸುರೇಶ್, ಶಿವಾನಂದ ನಾಯಕ್, ರಾಧಾಕೃಷ್ಣ ಉರಾಳ, ರಜಿನಿ ಶಾಸ್ತ್ರಿ ಪ್ರಶಸ್ತಿ ಪಡೆದರು.
ಈ ಸಂದರ್ಭದಲ್ಲಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಚೈತನ್ಯ ಗುರುಕುಲ ಶಾಲೆಯ ಕಾರ್ಯದರ್ಶಿ ಶಿವಸ್ವಾಮಿ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.