ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ರಾಜ್ಯ ಸರ್ಕಾರ ಸರ್ವೇ ನಡೆಸಲು ಮುಂದಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಲಾಗಿದೆ.
ಆದರೆ, ಎಸ್ಸಿ ಒಳಮೀಸಲಾತಿ ನೀಡಲು ಸೂಕ್ತ ಅಂಕಿ ಅಂಶಗಳ ಕೊರತೆ ಇದೆ. ಹೀಗಾಗಿಯೇ ಹೊಸದಾಗಿ ಸರ್ವೆ ಮಾಡಲು ನಿರ್ಧರಿಸಲಾಗಿದ್ದು, ಇಂದಿನಿಂದ ಮೇ 17ರವರೆಗೂ ಮೊದಲ ಹಂತದಲ್ಲಿ ಮನೆಮನೆಗೆ ತೆರಳಿ ಸರ್ವೇ ನಡೆಸಲಾಗುತ್ತೆ ಅಂತಾ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಹಿಂದಿನ ವರದಿಯಲ್ಲಿ ಆದಿ ದ್ರಾವಿಡ, ಆದಿ ಕರ್ನಾಟಕ ಮತ್ತು ಆದಿ ಆಂಧ್ರ ಅಂತಾ ಕೆಲವರು ಬರೆಸಿದ್ದಾರೆ. ಆದರೆ, ನಿಗದಿತವಾಗಿ ಎಡಗೈಗೆ ಸೇರಿದವರಾ? ಇಲ್ಲಾ ಬಲಗೈಗೆ ಸೇರಿದವರಾ? ಎನ್ನುವುದು ಗೊತ್ತಾಗಿಲ್ಲ. ಹೀಗಾಗಿ ಈ ಬಾರಿ ಮೂರು ಹಂತದಲ್ಲಿ ಹೊಸದಾಗಿ ಸರ್ವೇಗೆ ಮುಂದಾಗಿದ್ದು, ಪ್ರತಿಯೊಬ್ಬರು ತಪ್ಪಿಸದಂತೆ ತಮ್ಮ ಮಾಹಿತಿಯನ್ನು ನಿಗದಿತವಾಗಿ ನಮೂದಿಸುವಂತೆ ಸಿಎಂ ಕೋರಿದ್ದಾರೆ.
ಈ ಹಿನ್ನೆಲೆಯಲ್ಲೇ ಮೂರು ಹಂತದಲ್ಲಿ ರಾಜ್ಯದೆಲ್ಲೆಡೆ ಸರ್ವೇ ಕಾರ್ಯ ನಡೆಯಲಿದೆ. ಮೊದಲ ಹಂತ ಇಂದಿನಿಂದಲೇ ಆರಂಭವಾಗಿದ್ದು ಮೇ 17ರವರೆಗ ನಡೆಯಲಿದೆ. ಎರಡನೇ ಹಂತ ಮೇ 19ರಿಂದ 21ರವರೆಗೂ ನಡೆಯಲಿದೆ. ಹಾಗಂತಾ ಈ ಸರ್ವೆಗೆ ಶಿಬಿರಗಳನ್ನು ಮಾಡಲಾಗಿದ್ದು, ಅಲ್ಲಿಗೇ ಬಂದು ತಮ್ಮ ಮಾಹಿತಿಯನ್ನು ದಾಖಲಿಸಬೇಕಿದೆ. ಉಳಿದಂತೆ ಮೂರನೇ ಹಂತವನ್ನು ಆನ್ ಲೈನ್ ಮೂಲಕ ನಡೆಸಲು ತೀರ್ಮಾನಿಸಲಾಗಿದ್ದು, ಮೇ 19ರಿಂದ ಮೇ 23ರವರೆಗೂ ಜರುಗಲಿದೆ. ಆನ್ ಲೈನ್ ಮಾಹಿತಿ ದಾಖಲಿಸಲು ಮುಂಜಾನೆ 6.30ರಿಂದ ಸಂಜೆ 6.30ರ ವರೆಗೂ ಪೋರ್ಟಲ್ ತೆರೆದಿರುತ್ತೆ ಅಂತಲೂ ಸಿಎಂ ಸ್ಪಷ್ಟಪಡಿಸಿದ್ದಾರೆ.
ಅಂತಿಮ ವರದಿ ನೀಡಲು 60 ದಿನಗಳ ಗಡುವನ್ನು ನೀಡಲಾಗಿದ್ದು, ಅದರೊಳಗೆ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಲು ಸೂಚಿಸಲಿದೆ. ಈ ಕಾರ್ಯಕ್ಕೆ ರಾಜ್ಯದ 65 ಸಾವಿರ ಶಿಕ್ಷಕರನ್ನು ನಿಯೋಜಿಲಾಗಿದೆ ಅಂತಾ ಸಿದ್ದರಾಮಯ್ಯ ತಿಳಿಸಿದ್ದಾರೆ.



















