ಬೆಂಗಳೂರು : ಅಸ್ತಿತ್ವದಲ್ಲಿಲ್ಲದ ಮದ್ಯದಂಗಡಿಗಳನ್ನು ಹರಾಜು ಮಾಡಲು ಸಿದ್ಧತೆ ನಡೆದಿದ್ದು, ಈಗಾಗಲೆ ರಾಜ್ಯ ಅಬಕಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ.
ಕಾನೂನು ಬಾಹೀರವಾಗಿ ಹರಾಜು ಹಾಕಲು ಅಬಕಾರಿ ಇಲಾಖೆ ಮುಂದಾಗಿದೆ, ಈ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ಪ್ರಕ್ರಿಯೆಗಳು ನಡೆಯುತ್ತಿದ್ದು, ಇದೀಗ ಅಂತಿಮ ಹಂತಕ್ಕೆ ತಲುಪಿದೆ.
ಸನ್ನದುಗಳನ್ನು ಬಹಿರಂಗ ಹರಾಜು ಮಾಡಲು ಸಿದ್ದತೆ ನಡೆಸಿರುವ ರಾಜ್ಯ ಅಬಕಾರಿ ಇಲಾಖೆಯು, ನೆರೆಯ ರಾಜ್ಯ ತೆಲಂಗಾಣ ಮಾದರಿ ಅನುಸರಿಸಲು ಮುಂದಾಗಿದ್ದು, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ. ಸರ್ಕಾರ ಇದಕ್ಕೆ ಅನುಮೋದನೆ ನೀಡಿದರೆ ಹರಾಜು ಪ್ರಕ್ರಿಯೆ ಶುರುವಾಗಲಿದೆ.
ಅಕ್ರಮವಾಗಿ ಮದ್ಯದಂಗಡಿ ಪರವಾನಿಗೆಗಳು ಬಂಡವಾಳಶಾಹಿಗಳ ಪಾಲಾಗುವ ಸಾದ್ಯತೆ ಇದ್ದು, 2021-22ನೇ ಸಾಲಿನಲ್ಲಿ ದೆಹಲಿ ಸರ್ಕಾರ 849 ಮದ್ಯದ ಅಂಗಡಿಗಳನ್ನು ಬಹಿರಂಗ ಹರಾಜು ಹಾಕುವ ನಿಯಮ ರೂಪಿಸಿತ್ತು, ಇದಕ್ಕೆ ವಿರೋಧ ಪಕ್ಷಗಳು ಸೇರಿ ಸಾರ್ವಜನಿಕ ವಲಯದಿಂದ ವಿರೋಧ ವ್ಯಕ್ತವಾಗಿದ್ದರಿಂದ ಈ ವಿಚಾರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದು ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಅಂತಿಮವಾಗಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರಕ್ಕೆ ಈ ಹಗರಣ ಕಂಟಕವಾಗಿ ಪರಿಣಿಮಿಸಿತ್ತು.
ಇದೀಗ ರಾಜ್ಯದಲ್ಲಿಯೂ ಸಿಎಲ್-2 ಅಂಗಡಿಗಳನ್ನು ಬಹಿರಂಗವಾಗಿ ಹರಾಜು ಹಾಕಲು ಇಲಾಖೆಯು ಸಿದ್ಧತೆ ನಡೆಸಿದ್ದು, ನಗರದ ಪ್ರದೇಶದಲ್ಲಿ 2,510 ಹಾಗೂ ಗ್ರಾಮೀಣ ಪ್ರದೇಶಕ್ಕೆ 1,438 ಸಿಎಲ್-2 ಅಂಗಡಿಗಳ ಸನ್ನದು ಮಂಜೂರಾಗಿ ಸ್ಥಗಿತಗೊಂಡಿವೆ. ನವೀಕರಿಸದೆ ಬಾಕಿ ಉಳಿದ ಸಿಎಲ್2 ಸನ್ನದುಗಳ ಮೇಲೆ ಇಲಾಖೆಯು ಕಣ್ಣು ಇಟ್ಟಿದ್ದು, ಸ್ಥಗಿತವಾಗಿದ್ದ ಸನ್ನದುಗಳನ್ನು ಎಂಎಸ್‌ಐಎಲ್‌ಗೆ 2009 ಮತ್ತು 2016 ರಲ್ಲಿ ನೀಡಲಾಗಿದೆ.
ಇದೀಗ ಆದಾಯದ ನೆಪವೊಡ್ಡಿರುವ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಅಸ್ತಿತ್ವದಲ್ಲಿಲ್ಲದ ಮದ್ಯದಂಗಡಿಗಳನ್ನು ಹರಾಜು ಹಾಕಲು ಯತ್ನಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಹರಾಜು ಹಾಕಿದರೆ ಮದ್ಯದಂಗಡಿಗಳು ರಿಟೇಲರ್ ದೈತ್ಯ ಕಂಪನಿಗಳ ಪಾಲಾಗುವ ಸಾದ್ಯವಿದ್ದು, ದೊಡ್ಡ ಕಂಪನಿಗಳಿಂದ ಮಾರುಕಟ್ಟೆಯಲ್ಲಿ ಏಕ ಸ್ವಾಮ್ಯತ್ವ ಸೃಷ್ಟಿಸುವ ಸಾಧ್ಯತೆ ಕೂಡ ಹೆಚ್ಚಿದೆ. ಬಾಕಿ ಉಳಿದ ಕೋಟಾ ಹರಾಜು ಹಾಕಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಮದ್ಯದಂಗಡಿ ಪರವಾನಿಗೆ ಮೇಲೆ ಶೇ.80 ರಷ್ಟು ಜನಪ್ರತಿನಿಧಿಗಳು ಮತ್ತು ಅವರ ಆಪ್ತರು ಕಣ್ಣು ಇಟ್ಟಿದ್ದಾರೆ.