ಚನ್ನೈ: ತಮಿಳಿಗ ವಿಟ್ರಿ ಕಳಗಂ ಪಕ್ಷದ ಮುಖ್ಯಸ್ಥ, ನಟ ದಳಪತಿ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದೆ. ನಿನ್ನೆ(ಶನಿವಾರ) ಕರೂರಿನಲ್ಲಿ ನಡೆದ ಈ ಘಟನೆಯಲ್ಲಿ ಹಲವರು ನಿಧನರಾಗಿದ್ದಾರೆ. ಈ ಭೀಕರ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 39ಕ್ಕೆ ಏರಿಕೆ ಆಗಿದೆ ಎಂದು ತಿಳಿದು ಬಂದಿದೆ.
ತಮಿಳುನಾಡಿನ ಕರೂರಿನಲ್ಲಿ ದಳಪತಿ ವಿಜಯ್ ರಾಜಕೀಯ ರ‍್ಯಾಲಿ ಹಮ್ಮಿಕೊಂಡಿದ್ದರು. ನೆಚ್ಚಿನ ನಟ, ಭರವಸೆಯ ರಾಜಕಾರಣಿ ದಳಪತಿ ವಿಜಯ್ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಉಂಟಾದ ಕಾಲ್ತುಳಿತದಿಂದ ಈ ದುರಂತ ಸಂಭವಿಸಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.
ಕರೂರು ಕಾಲ್ತುಳಿದಲ್ಲಿ 6 ಮಕ್ಕಳು ಸೇರಿದಂತೆ ಈವರೆಗೂ ಒಟ್ಟು 39 ಜನರು ಮೃತರಾಗಿದ್ದಾರೆ. 40ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ರ‍್ಯಾಲಿಯಲ್ಲಿ ಅಂದಾಜು 60 ಸಾವಿರ ಜನರು ಸೇರಿದ್ದರು ಎನ್ನಲಾಗಿದೆ. ದಳಪತಿ ವಿಜಯ್ ಅವರನ್ನು ಹತ್ತಿರದಿಂದ ನೋಡಬೇಕು ಎಂಬ ಕಾರಣಕ್ಕೆ ಜನರು ಮುಗಿಬಿದ್ದ ಕಾರಣದಿಂದ ಕಾಲ್ತುಳಿತ ಸಂಭವಿಸಿದೆ.
ಈ ಕಾಲ್ತುಳಿತ ಸುದ್ದಿ ತಿಳಿದ ಕೂಡಲೇ ಅನೇಕ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ಅರವಿಂದ್ ಕೇಜ್ರಿವಾಲ್, ಎಂ.ಕೆ. ಸ್ಟಾಲಿನ್ ಮುಂತಾದವರು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.