ಆಂಧ್ರಪ್ರದೇಶದ ನಲ್ಲಮಲದ ದಟ್ಟ ಕಾಡುಗಳು ಈಗ ಜನ ಸಾಗರವಾಗಿ ಪರಿವರ್ತನೆಗೊಂಡಿವೆ. ಬಿಸಿಲಿನ ಝಳ, ಕಲ್ಲುಗುಂಡಿಗಳಿಂದ ಕೂಡಿದ ದಾರಿಗಳೆಲ್ಲವೂ ಶ್ರೀಶೈಲದತ್ತ ಮುಖಮಾಡಿವೆ. ಕರ್ನಾಟಕದಿಂದ ತೆರಳುವ ಭಕ್ತರು ಶ್ರೀಶೈಲದಲ್ಲಿರುವ ಭ್ರಮರಾಂಬಿಕಾ ದೇವಿಯನ್ನು ತಮ್ಮ ಮನೆಯ ಮಗಳೆಂದು ಭಾವಿಸುತ್ತಾ ಕುಪ್ಪಸ, ಸೀರೆಗಳನ್ನು ಅರ್ಪಿಸಲು ಇರುವೆಗಳಂತೆ ಸರತಿ ಸಾಲಿನಲ್ಲಿ ಈ ದಟ ಸಾಗುತ್ತಿದ್ದಾರೆ.
ಗುರುವಾರದಿಂದ ಶ್ರೀಶೈಲದಲ್ಲಿ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಉತ್ಸವಗಳು ನಡೆಯಲಿವೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನಿಂದ ಲಕ್ಷಾಂತರ ಯಾತ್ರಿಗಳು ನಲ್ಲಮಲ ಅರಣ್ಯ ಪ್ರದೇಶದ ಮೂಲಕ ಈ ಕ್ಷೇತ್ರಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಜನ ಸಂದಣಿಯಿಂದ ಶ್ರೀಶೈಲಂ ರಂಗೇರಿದೆ. “ಅರಣ್ಯ ಮಾರ್ಗದಲ್ಲಿ ಮಾತ್ರವಲ್ಲ, ಶ್ರೀಶೈಲದಲ್ಲಿಯೂ ವ್ಯಾಪಕ ಏರ್ಪಾಟುಗಳನ್ನು ಮಾಡಿದ್ದೇವೆ” ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಎಂ. ಶ್ರೀನಿವಾಸುಲು ಮಾಹಿತಿ ನೀಡಿದ್ದಾರೆ.
ಯುಗಾದಿ ದಿನದ ವೇಳೆಗೆ ಶ್ರೀಶೈಲಕ್ಕೆ ಕನಿಷ್ಠ 6 ಲಕ್ಷ ಯಾತ್ರಿಗಳು ಆಗಮಿಸುವ ನಿರೀಕ್ಷೆಯಿದೆ. ಈ ವರ್ಷ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಶ್ರೀ ಶೈಲದ ಹಿರಿಯ ಪತ್ರಕರ್ತ ಕೇಶವು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದ ಹಾಸನ ಜಿಲ್ಲೆಯಿಂದ ಶ್ರೀಶೈಲಂ 600 ಕಿ.ಮೀ ದೂರದಲ್ಲಿದೆ. ಬೆಳಗಾವಿ ಜಿಲ್ಲೆಯ ಹರುಗೇರಿಯಿಂದ 630 ಕಿ.ಮೀ ದೂರವಿದೆ. ಇಲ್ಲಿನವರು ಶ್ರೀಶೈಲದ ಪರಮ ಭಕ್ತರು ಹಾಗೂ ಪಾದಯಾತ್ರೆ ಮೂಲಕ ಭೇಟಿ ನೀಡುತ್ತಾರೆ.
ಹರುಗೇರಿ ಪ್ರದೇಶದ ಸುನೀಲ್ ಈಶ್ವರ್ ಮೋಲೆ (35) ಭ್ರಮರಾಂಬ ದೇವಿಗೆ ಕಾವಡಿಯೊಂದಿಗೆ ಸೀರೆಯನ್ನು ತಲೆಯ ಮೇಲೆ ಹೊತ್ತು ಶ್ರೀಶೈಲಕ್ಕೆ ಸಾಗುತ್ತಿರುವುದು ಕಂಡುಬಂತು. “ಕಳೆದ ಒಂಭತ್ತು ವರ್ಷಗಳಿಂದ ಯುಗಾದಿಗೆ ತಲುಪುವಂತೆ ನಮ್ಮ ಊರಿನಿಂದ ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಳ್ಳುತ್ತೇನೆ. 70 ಭಕ್ತರ ತಂಡದೊಂದಿಗೆ ಮಾರ್ಚ್ 13 ರಂದು ಹರುಗೇರಿಯಿಂದ ಹೊರಟೆವು. ದಿನಕ್ಕೆ 50 ಕಿ.ಮೀ ನಡೆಯುತ್ತಾ, 13 ದಿನಗಳಲ್ಲಿ ಶ್ರೀಶೈಲ ತಲುಪಿದೆವು” ಎಂದು ‘ದ ಫೆಡರಲ್’ ಜತೆ ಮಾತನಾಡುತ್ತಾರೆ ತಿಳಿಸಿದ್ದಾರೆ. “ನಮ್ಮ ಗ್ರಾಮದಿಂದ 31 ವರ್ಷಗಳಿಂದ ಯಾತ್ರಿಗಳು ಕಾಲ್ನಡಿಗೆಯಲ್ಲೇ ಬರುತ್ತಿದ್ದಾರೆ. ಇದು ಜೀವನದಲ್ಲಿ ಮರೆಯಲಾಗದ ಆಧ್ಯಾತ್ಮಿಕ ಪ್ರವಾಸ” ಎಂದು ಅವರು ವಿವರಿಸಿದರು.
“ಶ್ರೀಶೈಲದ ಭ್ರಮರಾಂಬ ದೇವಿ ಕನ್ನಡಿಗರಿಗೆ ಮನೆಯ ಮಗಳು. ನನ್ನ ಮನೆಯಿಂದ ಕಾವಡಿಗೆ ಸೀರೆ ಕಟ್ಟಿಕೊಂಡು ಬಂದಿದ್ದೇನೆ. ದಟ್ಟ ಕಾಡುಗಳಲ್ಲಿ ಸಾಗುವ ಪ್ರಯಾಣ ಅಪೂರ್ವ ಅನುಭವ ನೀಡಿತು. ಭ್ರಮರಾಂಬ ಸಮೇತ ಮಲ್ಲಯ್ಯನ ದರ್ಶನ ಪಡೆದು ಹರಕೆ ತೀರಿಸಿದೆವು. ಇಲ್ಲಿಂದ ವಾಹನದಲ್ಲಿ ಊರಿಗೆ ಮರಳುತ್ತೇವೆ” ಎಂದು ಸುನೀಲ್ ತಮ್ಮ ಅನುಭವ ಹಂಚಿಕೊಂಡರು.
ಉತ್ಸವದ ಆರಂಭ
ಗುರುವಾರ (ಮಾರ್ಚ್ 27) ಯಾಗಶಾಲೆ ಪ್ರವೇಶದೊಂದಿಗೆ ಶ್ರೀಶೈಲದಲ್ಲಿ ಯುಗಾದಿ ಉತ್ಸವಗಳು ಆರಂಭಗೊಂಡು, ಮಾರ್ಚ್ 31ಕ್ಕೆ ಮುಕ್ತಾಯಗೊಳ್ಳಲಿವೆ. “ಯಾತ್ರಿಗಳ ದಟ್ಟಣೆಯ ಹಿನ್ನೆಲೆಯಲ್ಲಿ ಅಲಂಕಾರ ದರ್ಶನ ಮಾತ್ರ ಲಭ್ಯವಿರುತ್ತದೆ” ಎಂದು ಇಒ ಶ್ರೀನಿವಾಸುಲು ಸ್ಪಷ್ಟಪಡಿಸಿದ್ದಾರೆ. ಮೂರು ಕ್ಯೂಗಳ ಮೂಲಕ ಉಚಿತ ದರ್ಶನ, ಶೀಘ್ರ ದರ್ಶನ ಮತ್ತು ಅತಿ ಶೀಘ್ರ ದರ್ಶನ ಲಭ್ಯವಿರುತ್ತದೆ. ಗುರುವಾರದಿಂದ ಸ್ಪರ್ಶ ದರ್ಶನ ಇರುವುದಿಲ್ಲ ಎಂದು ಅವರು ತಿಳಿಸಿದರು.
ನಲ್ಲಮಲದ ದಾರಿಗಳಲ್ಲಿ
ನಲ್ಲಮಲ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಓಡಾಟ ಹೆಚ್ಚು ಸಣ್ಣ ಗುಡಿಗಳ ಹೊರತಾಗಿ ಈ ಮಾರ್ಗದಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಸಂಪೂರ್ಣ ದಟ್ಟ ಅರಣ್ಯವೇ ಆವರಿಸಿದೆ. ಮಧ್ಯಾಹ್ನ ಚಿರತೆಗಳ ಸಂಚಾರ ಜಾಸ್ತಿಯಾಗಿರುತ್ತದೆ. ಆದರೆ ಯುಗಾದಿ ಸಮೀಪಿಸುತ್ತಿದ್ದಂತೆ ಕನ್ನಡ ಭಕ್ತರ ಪಾದಯಾತ್ರೆಯಿಂದಾಗಿ ನಲ್ಲಮಲ ಕಾಡು ಜನ ಸಾಗರವಾಗಿ ಮಾರ್ಪಟ್ಟಿದೆ. ತಲೆಯ ಮೇಲೆ ಭಾರ, ಕಾಲಿಗೆ ಚಪ್ಪಲಿಗಳಿಲ್ಲದೆ, ಭುಜಕ್ಕೆ ಚೀಲಗಳನ್ನು ಹೊತ್ತ ಲಕ್ಷಾಂತರ ಯಾತ್ರಿಗಳು ಶಿವನಾಮ ಸ್ಮರಣೆಯೊಂದಿಗೆ ಸಾಗುತ್ತಿದ್ದಾರೆ
ಯಾತ್ರೆಯ ಆರಂಭ
ಕರ್ನಾಟಕದಿಂದ ಒಂದು ತಿಂಗಳ ಹಿಂದಿನಿಂದಲೇ ಯಾತ್ರೆ ಆರಂಭಗೊಂಡಿದೆ. ಹರಕೆಗಳನ್ನು ತೀರಿಸಲು ಯಾತ್ರಿಗಳು ವಿವಿಧ ರೀತಿಯಲ್ಲಿ ಕಾಲ್ನಡಿಗೆ ಸಾಗುತ್ತಿದ್ದಾರೆ. ಕರ್ನೂಲು, ಆತ್ಮಕೂರು ಮಾರ್ಗಗಳೆಲ್ಲವೂ ಭಕ್ತರಿಂದ ಕಿಕ್ಕಿರಿದಿವೆ. ನಲ್ಲಮಲ ಕಾಡಿನಲ್ಲಿ ನಡೆಯುವುದು ಸಾಹಸದ ಸಂಗತಿಯೇ ಸರಿ.
ನಲ್ಲಮಲ ಅರಣ್ಯದ ತುಮ್ಮಲಬಯಲು ಸಫಾರಿಯಿಂದ ಯಾತ್ರಿಗಳ ಕಾಲ್ನಡಿಗೆ ಶುರುವಾಗುತ್ತದೆ. ಆಂಧ್ರಪ್ರದೇಶದ ಜೊತೆಗೆ ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ಪ್ರದೇಶದಿಂದ ಬರುವವರು ಒಟ್ಟಾಗಿ ಸೇರುತ್ತಾರೆ. ಯುಗಾದಿಗೆ ಶ್ರೀಶೈಲಕ್ಕೆ ಸುಮಾರು 50,000 ಕ್ಕೂ ಹೆಚ್ಚು ಯಾತ್ರಿಗಳು ಈ ಸಾಹಸ ಯಾತ್ರೆಯ ಮೂಲಕ ಬರುತ್ತಾರೆ ಎಂದು ಆತ್ಮಕೂರು ಪ್ರದೇಶದ ಪತ್ರಕರ್ತರೊಬ್ಬರು ತಿಳಿಸಿದ್ದಾರೆ. ಕನಿಷ್ಠ ಒಂದು ಲಕ್ಷ ಜನರಿಗೆ ವಸತಿ ಕಲ್ಪಿಸಲು ದೇವಸ್ಥಾನ ಅಧಿಕಾರಿಗಳು ಏರ್ಪಾಟು ಮಾಡುತ್ತಾರೆ ಎಂದು ಹಿರಿಯ ಪತ್ರಕರ್ತ ಕೇಶವು ಹೇಳಿದರು. ಕೆಲವರು ಎರಡು ಕಾಲುಗಳಿಗೆ ಕೋಲುಗಳನ್ನು ಕಟ್ಟಿಕೊಂಡು ಸಾಹಸದ ನಡಿಗೆ ಸಾಗಿಸುತ್ತಿರುವುದು ವಿಶೇಷ. ಕರ್ನಾಟಕದ ವಿವಿಧ ಪ್ರದೇಶಗಳ ಯುವಕರು ಕೋಲುಗಳನ್ನೇ ಕಾಲುಗಳಂತೆ ಬಳಸಿ ಭಕ್ತಿ ಪ್ರದರ್ಶಿಸುತ್ತಾರೆ.
ಮೂಲಸೌಕರ್ಯ ಇಲ್ಲದ ದಾರಿಗಳು
ಇದು ಭಯಂಕರ ಕಾಡು ಪ್ರದೇಶ. ಒಂದು ಕಾಲದಲ್ಲಿ ನಕ್ಸಲೈಟ್‌ಗಳ ರಾಜಧಾನಿಯಂತಿದ್ದ ಸ್ಥಳ. ಈಗ ಆ ಪರಿಸ್ಥಿತಿ ತಿಳಿಯಾಗಿದೆ. ಕರ್ನೂಲು ಜಿಲ್ಲೆಯ ಆತ್ಮಕೂರಿನಿಂದ ದೊರ್ನಾಲಕ್ಕೆ ಸಮೀಪದ ವೆಂಕಟಾಪುರಂ ಗ್ರಾಮದಿಂದ ಕಾಡು ದಾರಿಯಲ್ಲಿ ಸಾಗುವ ಯಾತ್ರಿಗಳು, ಸುಮಾರು 40 ಕಿ.ಮೀ ದೂರದ ಶ್ರೀಶೈಲ ತಲುಪುತ್ತಾರೆ. ಅರಣ್ಯ ಮಾರ್ಗದಲ್ಲಿ ಪೆದ್ದ ಚೆರುವು, ನಾಗಲೂರು, ಭೀಮುನಿ ಕೊಲನು ಮೂಲಕ ಕೈಲಾಸ ಪರ್ವತ ದಾಟಿ ಭ್ರಮರಾಂಬ ಸಮೇತ ಮಲ್ಲಿಕಾರ್ಜುನನ ಸನ್ನಿಧಿಗೆ ತಲುಪುತ್ತಾರೆ. ಗುಡಿಗಳ ಹೊರತಾಗಿ, ಯಾತ್ರಿಗಳಿಗೆ ಕಾಣುವುದು ಕಾಡು ಪ್ರಾಣಿಗಳು ಮಾತ್ರ.
ನಾಗಾರ್ಜುನ ಸಾಗರ ಟೈಗರ್ ರಿಸರ್ವ್‌ನಲ್ಲಿರುವ ನಾಗಲೂರು ಬಳಿಯ ವನ್ಯ ಜೀವ ಸಂರಕ್ಷಣ ಕೇಂದ್ರವು ಯಾತ್ರಿಗಳಿಗೆ ಕಣ್ಣಿಗೆ ಹಬ್ಬವಾಗಿದೆ. ಇದೇ ಮಾರ್ಗದಲ್ಲಿ 9 ಕಿ.ಮೀ ನಡೆದ ಬಳಿಕ ವೀರಭದ್ರ ಸ್ವಾಮಿ ದೇವಾಲಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಲು ಅವಕಾಶವಿದೆ. ಆ ನಂತರ ಬೆಟ್ಟ ಏರಿ ಇಳಿಯುವ ಸಾಹಸ ಯಾತ್ರೆ ಸಾಗುತ್ತದೆ. ಈ ಪ್ರದೇಶ ಸ್ವಲ್ಪ ಕಷ್ಟವಾದರೂ, ಯಾತ್ರಿಗಳ ಸಂಕಲ್ಪದ ಮುಂದೆ ಅದು ದೊಡ್ಡ ವಿಷಯವೇನಲ್ಲ. ಈ ಸ್ಥಳವನ್ನು ತಲುಪಲು ಕನಿಷ್ಠ 5 ಗಂಟೆಗಳ ಕಾಲ ನಡೆದ ಬಳಿಕ ಪೆದ್ದ ಚೆರುವು ಚೆಂಚು ಗುಡಿಯಲ್ಲಿ ಆಯಾಸ ತೀರಿಸಿಕೊಳ್ಳುತ್ತಾರೆ. ರಾತ್ರಿ ಪೆದ್ದ ಚೆರುವಿನಲ್ಲಿ ವಿಶ್ರಾಂತಿ ಪಡೆದು, ಮರುದಿನ ಬೆಳಗ್ಗೆ ಮತ್ತೆ ನಡಿಗೆ ಆರಂಭಿಸುತ್ತಾರೆ. ಎರಡು ಹಂತಗಳಲ್ಲಿ ಸುಮಾರು 7 ಕಿ.ಮೀ ಪ್ರಯಾಣದಲ್ಲಿ ಎರಡು ಬೆಟ್ಟಗಳನ್ನು ಏರಿ ಇಳಿದ ಬಳಿಕ ಮಠಂ ಬಾವಿಗೆ ತಲುಪುತ್ತಾರೆ.
ಶ್ರೀಶೈಲಂ ಕಡೆಗೆ ಕಠಿಣ ಹಾದಿ
ಮಠಂ ಬಾವಿಯಿಂದ ಯಾತ್ರಿಗಳು ಮುಂದುವರಿದು, ಗಿರಿಜನರು ಜೀವನ ಸಾಗಿಸುವ ಭೀಮುನಿ ಚೆರುವಿಗೆ ತಲುಪಿ, ಅವರೊಂದಿಗೆ ಸ್ವಲ್ಪ ಸಂತಸದ ಕ್ಷಣಗಳನ್ನು ಕಳೆಯುತ್ತಾರೆ. ಆ ನಂತರ ಕೆಲವು ಕಿ.ಮೀ ಪ್ರಯಾಣದ ಬಳಿಕ ಕೈಲಾಸ ದ್ವಾರ ಎಂದು ಕರೆಯಲಾಗುವ ಸ್ಥಳಕ್ಕೆ ತಲುಪುವುದರೊಂದಿಗೆ ಬೆಟ್ಟದ ಮಾರ್ಗದಿಂದ ಡೋರ್ನಾಲ-ಶ್ರೀಶೈಲದ ಮುಖ್ಯ ರಸ್ತೆಗೆ ಸೇರುತ್ತಾರೆ. ಆ ನಂತರ ಶ್ರೀಶೈಲದ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸನ್ನಿಧಿಗೆ ಆಗಮಿಸುತ್ತಾರೆ.
ಭ್ರಮರಿಗಾಗಿ ಸಾಹಸ ಯಾತ್ರೆ
ಕನ್ನಡ ಭಕ್ತರು ಸಾಹಸದಿಂದ ಸಾಗಿಸುವ ಈ ನಡಿಗೆಯ ಹಿಂದೆ ಆಸಕ್ತಿದಾಯಕ ಕತೆಯಿದೆ. ಕರ್ನಾಟಕ ಪ್ರದೇಶದ ಯಾತ್ರಿಗಳು ಭ್ರಮರಾಂಬಿಕಾ ದೇವಿಯನ್ನು ತಮ್ಮ ಮನೆಯ ಮಗಳು ಎಂದು ಭಾವಿಸುತ್ತಾರೆ. ಹೀಗಾಗಿ ಅರಿಶಿನ, ಕುಂಕುಮ, ಬಳೆಗಳು, ಸೀರೆ , ರವಿಕೆ, ಅಕ್ಕಿಯನ್ನು ಕಾವಡಿ ಅಥವಾ ಸಣ್ಣ ಪಲ್ಲಕ್ಕಿಯಲ್ಲಿ ಇರಿಸಿಕೊಂಡು ಶ್ರೀಶೈಲ ತಲುಪುತ್ತಾರೆ ಜೊತೆಗೆ ಅಮ್ಮನವರ ಹಣೆಗೆ ಇಡಲು ಮೆಣಸಿನ ಪುಡಿಯನ್ನೂ ವಿಶೇಷವಾಗಿ ತೆಗೆದುಕೊಂಡು ಬರುತ್ತಾರೆ. ಯುಗಾದಿ ದಿನದಂದು ಅಮ್ಮನವರಿಗೆ ಸೀರೆ ಸಮರ್ಪಿಸಿ ತಮ್ಮ ಹರಕತೆ ತೀರಿಸುವುದು ಮಾತ್ರವಲ್ಲ, ತಮ್ಮ ಮನೆ ಮಗಳಿಗೆ ಯಾವ ಕೊರತೆಯೂ ಇಲ್ಲದಂತೆ ಮಾಡಿದೆವು ಎಂಬ ತೃಪ್ತಿಯೊಂದಿಗೆ ಪ್ರಯಾಣ ಬೆಳೆಸುತ್ತಾರೆ.
ಭಕ್ತರಿಗೆ ಹಲವು ವ್ಯವಸ್ಥೆಗಳು
ಶ್ರೀಶೈಲದ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸನ್ನಿಧಿಗೆ ಬರುವ ಯಾತ್ರಿಗಳಿಗಾಗಿ ವ್ಯಾಪಕ ಏರ್ಪಾಟುಗಳನ್ನು ಮಾಡಲಾಗಿದೆ. ಆಲಯದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸರಾವ್ ಅಧಿಕಾರಿಗಳೊಂದಿಗೆ ವಿಶೇಷವಾಗಿ ಸಮೀಕ್ಷೆ ನಡೆಸಿದ್ದಾರೆ. ಲಕ್ಷಾಂತರ ಯಾತ್ರಿಗಳಿಗೆ ತೆರೆದ ಜಾಗದಲ್ಲಿ ವಸತಿ, ಶಾಮಿಯಾನಗಳು, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ.
“ಕಾಲ್ನಡಿಗೆ ಯಾತ್ರಿಗಳಿಗಾಗಿ ವೆಂಕಟಾಪುರಂ, ನಾಗಲೂಟಿ, ದಾಮೆರ್ಲ ಕುಂಟ ಪೆದ್ದ ಚೆರುವು, ಮಠಂ ಬಾವಿಯಲ್ಲಿ ಹಾಗೂ ಅರಣ್ಯ ಮಾರ್ಗದಲ್ಲಿ ಏರ್ಪಾಟುಗಳನ್ನು ಮಾಡಿದ್ದೇವೆ” ಎಂದು ಇಒ ಎಂ. ಶ್ರೀನಿವಾಸುಲು ತಿಳಿಸಿದ್ದಾರೆ. “ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯದ ಮೂಲಕ ಯಾತ್ರಿಗಳಿಗೆ ನೀರು, ತುರ್ತು ಔಷಧಿಗಳು, ಉಪಾಹಾರ ಸೌಲಭ್ಯಗಳನ್ನು ಒದಗಿಸಲು ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ” ಎಂದು ಅವರು ಹೇಳಿದರು. ಶ್ರೀಶೈಲದಲ್ಲಿ ಈ ಹಿಂದೆ ಎಂದೂ ಇರದಂತಹ ಏರ್ಪಾಟುಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ನಂದ್ಯಾಲ ಜಿಲ್ಲೆಯ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಯಾತ್ರಿಗಳಿಗೆ ತುರ್ತು ವೈದ್ಯ ಸೇವೆಗಳನ್ನು ಒದಗಿಸಲು ಕೈಲಾಸ ದ್ವಾರ, ಹಠಕೇಶ್ವರಂ, ಆಲಯ ಮಹಾದ್ವಾರ ಸೇರಿದಂತೆ ಶ್ರೀಶೈಲದ ಹಲವು ಪ್ರದೇಶಗಳಲ್ಲಿ ವೈದ್ಯ ಶಿಬಿರಗಳನ್ನು ಏರ್ಪಡಿಸಲಾಗಿದೆ.
ಲಕ್ಷಾಂತರಿಗೆ ವಸತಿ
ಶ್ರೀಶೈಲ ಆಲಯದ ಜೊತೆಗೆ ಸುತ್ತಮುತ್ತಲಿನ ಖಾಲಿ ಜಾಗಗಳಲ್ಲಿ ಸಾಮಾನ್ಯ ಯಾತ್ರಿಗಳಿಗಾಗಿ ತೆರೆದ ಜಾಗದಲ್ಲೇ ವಿಶಾಲವಾದ ಏರ್ಪಾಟುಗಳನ್ನು ಮಾಡಲಾಗಿದೆ. ಖಾಲಿ ಜಾಗಗಳನ್ನು ಸ್ವಚ್ಛಗೊಳಿಸಿ ಶಾಮಿಯಾನಗಳನ್ನು ಹಾಕಲಾಗಿದೆ. ನೆಲದ ಮೇಲೆ ಮಂಚವನ್ನೂ ಇಡಲಾಗಿದೆ. . ಸಮೀಪದಲ್ಲಿ ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳನ್ನೂ ಒದಗಿಸಲಾಗಿದೆ. ಯುಗಾದಿ ದಿನದ ವೇಳೆಗೆ ಶ್ರೀಶೈಲ ಪ್ರದೇಶದಲ್ಲಿ ಕನಿಷ್ಠ 4 ರಿಂದ 5 ಲಕ್ಷ ಯಾತ್ರಿಗಳು ಆಗಮಿಸುವ ಸಾಧ್ಯತೆ ಇದೆ ಎಂದು ಹಿರಿಯ ಪತ್ರಕರ್ತ ಕೇಶವು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ತಕ್ಕಂತೆ ದೇವಸ್ಥಾನ ಏರ್ಪಾಟು ಮಾಡಿದರೂ ಇಬ್ಬಂದಿಗಳು ಸಾಮಾನ್ಯವಾಗಿರುತ್ತವೆ ಎಂದು ಅವರು ತಿಳಿಸಿದರು.