ಏಷ್ಯಾ ಕಪ್ ಮಹಿಳಾ ಟೂರ್ನಿಯಲ್ಲಿ ಆತಿಥೇಯ ಶ್ರೀಲಂಕಾ ಹಾಗೂ ಪಾಕಿಸ್ತಾನ ಮಧ್ಯೆ ಎರಡನೇ ಸೆಮಿಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಶ್ರೀಲಂಕಾ ಫೈನಲ್ ಪ್ರವೇಶಿಸಿದೆ. ಫೈನಲ್ ನಲ್ಲಿ ಕಪ್ ಗಾಗಿ ಭಾರತದ ಎದುರು ಪೈಪೋಟಿ ನಡೆಸಲಿದೆ.
ಚಾಮರಿ ಅಥಾಪತ್ತು ನಾಯಕತ್ವದ ಶ್ರೀಲಂಕಾ ಮಹಿಳಾ ತಂಡ, ಪಾಕಿಸ್ತಾನ ತಂಡವನ್ನು 3 ವಿಕೆಟ್ ಗಳಿಂದ ಮಣಿಸಿ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಕೊನೆಯ ಓವರ್ ನ 5ನೇ ಎಸೆತದಲ್ಲಿ ಗೆಲುವಿನ ಕೇಕೆ ಹಾಕಿತು.
ಲಂಕಾ ಪರ ನಾಯಕಿ ಚಾಮರಿ ಅಥಾಪತ್ತು 63 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು. ಸೆಮಿಫೈನಲ್ ಗೆದ್ದಿರುವ ಶ್ರೀಲಂಕಾ ತಂಡ ಭಾನುವಾರ ನಡೆಯಲ್ಲಿರುವ ಫೈನಲ್ ನಲ್ಲಿ ಭಾರತದ ವಿರುದ್ಧ ಕಾದಾಟ ನಡೆಸಲಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ಆರಂಭಿಕರಾದ ಗುಲ್ ಫಿರೋಜಾ ಮತ್ತು ಮುನೀಬ ಅಲಿ ಮೊದಲ ವಿಕೆಟ್ ಗೆ 61 ರನ್ ಗಳ ಜೊತೆಯಾಟ ನೀಡಿದರು. ಆದರೆ ಈ ಜೊತೆಯಾಟ ಮುರಿಯುವುದರ ಜೊತೆಗೆ ತಂಡ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಪಾಕ್ ಪರ ಗುಲ್ ಫಿರೋಜಾ 25 ರನ್ ಬಾರಿಸಿದರೆ, ಮುನೀಬ ಅಲಿ 37 ರನ್ಗಳ ಇನ್ನಿಂಗ್ಸ್ ಆಡಿದರು. ಸಿದ್ರಾ ಅಮೀನ್ 10 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ನಾಯಕಿ ನಿದಾ ದರ್ 23 ರನ್ ಬಾರಿಸಿದರು. ಕೊನೆಯಲ್ಲಿ ಅಲಿಯಾ ರಿಯಾಜ್ ಅಜೇಯ 16 ರನ್, ಫಾತಿಮಾ ಸನಾ 23 ರನ್ ಗಳಿಸಿದರು.
ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್ ನ ಮೂರನೇ ಎಸೆತದಲ್ಲಿ ವಿಶ್ಮಿ ಗುಣರತ್ನೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಹರ್ಷಿತಾ ಸಮರವಿಕ್ರಮ 12 ರನ್ ಗಳಿಸಿದರು. ಕವಿಶಾ ದಿಲ್ಹಾರಿ ಕೂಡ 17 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. 19ನೇ ಓವರ್ ನಲ್ಲಿ ನೀಡಿದ 13 ರನ್ ಗಳು ತುಂಬಾ ದುಬಾರಿಯಾಗಿ ತಂಡ ಸೋಲುವಂತಾಯಿತು.