ಶ್ರೀಲಂಕಾ ಎ ಹಾಗೂ ಪಾಕಿಸ್ತಾನ ಎ ತಂಡಗಳ ಮಧ್ಯೆ ನಡೆದ ಉದಯೋನ್ಮುಖ ಟೀಂ ಏಷ್ಯಾಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ ಎ ತಂಡವನ್ನು ಮಣಿಸಿದ ಶ್ರೀಲಂಕಾ ಎ ಮೊದಲ ತಂಡವಾಗಿ ಫೈನಲ್ ಪ್ರವೇಶ ಮಾಡಿದೆ.
ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಸಲುವಾಗಿ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ ಎ ತಂಡ 16.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಭರ್ಜರಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು. ಅಲ್ಲದೇ, ಇಂದು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಪಂದ್ಯಾವಳಿಯಲ್ಲಿ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಪಾಕಿಸ್ತಾನ ತಂಡ ಲೀಗ್ ಸುತ್ತಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 2 ಗೆಲುವು ಸಾಧಿಸಿತ್ತು. ಎ ಗುಂಪಿನಲ್ಲಿದ್ದ ಶ್ರೀಲಂಕಾ ತಂಡ ಲೀಗ್ ಸುತ್ತಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದು ಗುಂಪಿನಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಸೆಮಿಫೈನಲ್ ಪ್ರವೇಶಿಸಿತ್ತು. ಹೀಗಾಗಿ ಈ ಎರಡೂ ತಂಡಗಳ ಮಧ್ಯೆ ಸೆಮಿಫೈನಲ್ ಪಂದ್ಯ ನಡೆದಿತ್ತು.
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ತಂಡಕ್ಕೆ ಸಾಧಾರಣ ಆರಂಭ ಸಿಕ್ಕಿತು. ಮೊದಲ ವಿಕೆಟ್ಗೆ 24 ರನ್ ಗಳಿಸಲು ಆರಂಭಿಕ ಜೋಡಿ ಯಶಸ್ವಿಯಾಯಿತು. ಈ ವೇಳೆ ಯಾಸಿರ್ ಖಾನ್ 2 ರನ್ಗಳಿಸಿ ಔಟಾದರೆ, ಆ ನಂತರ ಬಂದ ನಾಯಕ ಮೊಹಮ್ಮದ್ ಹ್ಯಾರಿಸ್ 6 ರನ್ ಗಳಿಸಿದರು. 4ನೇ ಕ್ರಮಾಂಕದಲ್ಲಿ ಬಂದ ಖಾಸಿಂ ಅಕ್ರಮ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಹೈದರಲ್ ಅಲಿ 14 ರನ್ಗಳ ಕಾಣಿಕೆ ನೀಡುವ ಮೂಲಕ ತಂಡವನ್ನು 90 ರ ಗಡಿ ದಾಟಿಸಿದರು. ಒಮೈರ್ ಯೂಸುಫ್ 46 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಿತ 68 ರನ್ ಗಳಿಸುವುದರ ಮೂಲಕ ತಂಡದ ಮೊತ್ತವನ್ನು 135 ರನ್ ಗಳಿಗೆ ಏರಿಸಿದರು.
135 ರನ್ಗಳ ಅಲ್ಪ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೂ ಮೊದಲ ವಿಕೆಟ್ ಗೆ 24 ರನ್ ಗಳ ಜೊತೆಯಾಟ ಸಿಕ್ಕಿತು. ಆದರೆ, ನಂತರ ಲಹಿರು ಉದಾರ ಹಾಗೂ ಅಹಾನ್ ವಿಕ್ರಮಸಿಂಘೆ ಅರ್ಧಶತಕದ ಜೊತೆಯಾಟ ನಡೆಸಿ ತಂಡಕ್ಕೆ ಗೆಲುವು ನೀಡಿದರು.