ಚೆನ್ನೈ; ಮಧ್ಯಪ್ರದೇಶದಲ್ಲಿ ವಿಷಕಾರಿ ಕೆಮ್ಮಿನ ಸಿರಪ್ ಸೇವಿಸಿ ಸುಮಾರು 20 ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳುನಾಡು ಮೂಲದ ಶ್ರೇಸನ್ ಫಾರ್ಮಾ ಕಂಪನಿಯ ಮಾಲೀಕ ಎಸ್. ರಂಗನಾಥನ್ ಅವರನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ.
‘ಕೋಲ್ಡ್ರಿಫ್’ ಎಂಬ ಹೆಸರಿನ ಈ ಕೆಮ್ಮಿನ ಸಿರಪ್ ಸೇವನೆಯಿಂದ ಹಲವು ಮಕ್ಕಳು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಪೊಲೀಸರ ತಂಡವೊಂದು ಚೆನ್ನೈಗೆ ಆಗಮಿಸಿ, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬುಧವಾರ ತಡರಾತ್ರಿ ಅಶೋಕ್ ನಗರದಲ್ಲಿರುವ ರಂಗನಾಥನ್ ನಿವಾಸದಲ್ಲಿ ಅವರನ್ನು ಬಂಧಿಸಿದೆ. ಮಧ್ಯಪ್ರದೇಶ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105, 276 ಮತ್ತು 27ಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
“ಘಟನೆಯ ಹಿನ್ನೆಲೆ”
ಮಧ್ಯಪ್ರದೇಶದಲ್ಲಿ ‘ಕೋಲ್ಡ್ರಿಫ್’ ಸಿರಪ್ ಸೇವನೆಯಿಂದ ಮಕ್ಕಳು ಸಾವನ್ನಪ್ಪಿದ್ದು, ರಾಜ್ಯದಲ್ಲಿ ದೊಡ್ಡ ಆರೋಗ್ಯ ಬಿಕ್ಕಟ್ಟು ಸೃಷ್ಟಿಯಾಗಿದೆ. ವೈದ್ಯಕೀಯ ತನಿಖೆಗಳ ಪ್ರಕಾರ, ಈ ಸಿರಪ್‌ನಲ್ಲಿದ್ದ ವಿಷಕಾರಿ ರಾಸಾಯನಿಕಗಳು ಮಕ್ಕಳ ಕಿಡ್ನಿಗಳನ್ನು ತೀವ್ರವಾಗಿ ಹಾನಿಗೊಳಿಸಿವೆ. ಸಿರಪ್ ಸೇವಿಸಿದ ಕೆಲವೇ ಗಂಟೆಗಳಲ್ಲಿ ಮಕ್ಕಳಲ್ಲಿ ಮೂತ್ರಪಿಂಡ ವೈಫಲ್ಯದ ಲಕ್ಷಣಗಳು ಕಾಣಿಸಿಕೊಂಡು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಹದಗೆಟ್ಟಿತ್ತು.
“ಸರ್ಕಾರದ ಕ್ರಮ ಮತ್ತು ನಿಷೇಧ”
ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಮಧ್ಯಪ್ರದೇಶದ ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ ಭರವಸೆ ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಕರ್ನಾಟಕ, ಪಂಜಾಬ್, ಗೋವಾ, ಹರ್ಯಾಣ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ‘ಕೋಲ್ಡ್ರಿಫ್’ ಸಿರಪ್ ಮಾರಾಟವನ್ನು ನಿಷೇಧಿಸಲಾಗಿದೆ. ಮಧ್ಯಪ್ರದೇಶದ ಛಿಂದವಾಡಾ ಜಿಲ್ಲಾಡಳಿತವು ಐದು ವೈದ್ಯಕೀಯ ಮಳಿಗೆಗಳನ್ನು ಸೀಲ್ ಮಾಡಿದ್ದು, ಸಿರಪ್ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದೆ.
ಈ ಪ್ರಕರಣದಲ್ಲಿ ಕೆಲವು ಖಾಸಗಿ ವೈದ್ಯರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ವೈದ್ಯರನ್ನು ಸುಖಾಸುಮ್ಮನೆ ಸಿಲುಕಿಸಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕಳವಳ ವ್ಯಕ್ತಪಡಿಸಿದೆ.
ಈ ದುರಂತದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಕೂಡ ಸಲ್ಲಿಸಲಾಗಿದೆ. ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಲು ಮತ್ತು ದೇಶದ ಔಷಧ ಸುರಕ್ಷತಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಅರ್ಜಿಯಲ್ಲಿ ಕೋರಲಾಗಿದೆ.