ಬೆಂಗಳೂರು | ಮನರೇಗಾ ರದ್ಧತಿ ಬಗ್ಗೆ ಮತ್ತು ವಿಬಿ-ಜಿ ರಾಮ್ ಜಿ ಕಾಯ್ದೆಯ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಜನವರಿ 22ರಿಂದ ಜನವರಿ 31ರವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಸಚಿವ ಹೆಚ್ ಕೆ ಪಾಟೀಲ್, “ವಿಬಿ-ಜಿ ರಾಮ್ ಜಿ ಕಾಯ್ದೆ ಸಾಮಾಜಿಕ ಹಾಗೂ ಆರ್ಥಿಕವಾಗಿ ಬೀರುವ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.
“ಸರ್ಕಾರವು ಈ ವಿಚಾರದಲ್ಲಿ ಜನರ ಮತ್ತು ರಾಜ್ಯದ ಹಿತ ಕಾಪಾಡುವಂತಹ ಸೂಕ್ತ ಹೆಜ್ಜೆಯನ್ನಿಡಲಿದೆ. ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ರಾಜ್ಯದ ಜನರ ಹಕ್ಕನ್ನು ಕಿತ್ತುಕೊಳ್ಳಲು ಮುಂದಾಗಿರುವಾಗ ಅದನ್ನು ನೋಡಿ ಸುಮ್ಮನೆ ಕೂರಲಾಗದು. ಈ ಸಂದರ್ಭದಲ್ಲಿ ಅಧಿವೇಶನ ಮುಖ್ಯ” ಎಂದರು.
“ಮನರೇಗಾ ರದ್ಧತಿ ವಿರುದ್ಧ ಈಗಾಗಲೇ ಪಂಜಾಬ್, ತಮಿಳುನಾಡು ಸರ್ಕಾರ ಧ್ವನಿ ಎತ್ತಿವೆ. ಆರೇಳು ರಾಜ್ಯಗಳು ತಮ್ಮ ಸ್ಪಷ್ಟ ನಿಲುವು ಹಾಗೂ ಅಸಮಾಧಾನವನ್ನು ಹೊರಹಾಕಿವೆ. ಹೊಸ ಕಾಯ್ದೆಯಡಿ ಪಂಚಾಯತಿಗಳಿಗೆ ಯಾವುದೇ ಅಧಿಕಾರವಿಲ್ಲ. ಎಲ್ಲಿ ಕಾಮಗಾರಿ ನಡೆಯಬೇಕು ಎಂದು ಕೇಂದ್ರ ಸರ್ಕಾರವೇ ನಿರ್ಧರಿಸುತ್ತದೆ. ಇದು ಸರಿಯಲ್ಲ” ಎಂದು ಹೇಳಿದರು.
ಇದನ್ನೂ ಓದಿ : ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರಗೆ ಬಿಗ್ ರಿಲೀಫ್ | ನಿರೀಕ್ಷಣಾ ಜಾಮೀನು ಮಂಜೂರು



















