ತಿರುವನಂತಪುರಂ: 2011ರ ಸೌಮ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಗೋವಿಂದಚಾಮಿ (ಚಾರ್ಲಿ ಥಾಮಸ್) ಇಂದು ಕೇರಳದ ಕಣ್ಣೂರು ಕೇಂದ್ರ ಕಾರಾಗ್ರಹದಿಂದ ಪಲಾಯನಗೈದಿದ್ದಾನೆ. ಆದರೆ, ಕೇವಲ ಕೆಲವೇ ಗಂಟೆಗಳ ಅವಧಿಯಲ್ಲಿ ಪೊಲೀಸರ ಕೈಗೆ ಮತ್ತೆ ಸೆರೆಸಿಕ್ಕಿ ಜೈಲು ಪಾಲಾಗಿದ್ದಾನೆ. ಈ ಘಟನೆಯು ಜೈಲು ಭದ್ರತೆಯ ಲೋಪಗಳನ್ನು ಬಯಲು ಮಾಡುವುದರ ಜೊತೆಗೆ, ಸೌಮ್ಯಾ ಪ್ರಕರಣದ ಭೀಕರ ನೆನಪುಗಳನ್ನು ಮತ್ತೆ ಕೆದಕಿದೆ.
ಒಂದು ಕೈ ಇಲ್ಲದ ಈ ಕೈದಿ, ಬಿಗಿಭದ್ರತೆಯ ಜೈಲಿನ 25 ಅಡಿ ಎತ್ತರದ ಗೋಡೆಯನ್ನು ಬೆಡ್‌ಶೀಟ್‌ಗಳಿಂದ ರೋಪ್ ಮಾಡಿ ಏರಿ ತಪ್ಪಿಸಿಕೊಂಡಿದ್ದ. ಪಲಾಯನದ ನಂತರ ಅವನು ತಲಪ್ ಪ್ರದೇಶದಲ್ಲಿನ ಖಾಲಿ ಮನೆಯ ಬಾವಿಗೆ ಹಾರಿ, ಪೊಲೀಸರ ಕೈಗೆ ಸಿಗದಂತೆ ಪ್ಲ್ಯಾನ್ ಮಾಡಿದ್ದ. ಆದರೆ, ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಸ್ಥಳೀಯರು ಅಲರ್ಟ್ ಆದ ಕಾರಣ, 10 ಗಂಟೆಗಳ ಒಳಗಾಗಿ ಅಪರಾಧಿಯು ಬಾವಿಯೊಳಗೆ ಸಿಕ್ಕಿಬಿದ್ದಿದ್ದು, ಆತನನ್ನು ಹೊರತೆಗೆದು ಪೊಲೀಸರು ಮತ್ತೆ ಜೈಲಿಗಟ್ಟಿದ್ದಾರೆ.
ಈ ಘಟನೆಯು ಜೈಲು ಭದ್ರತೆಯಲ್ಲಿನ ಲೋಪಗಳನ್ನೂ ಬೆಳಕಿಗೆ ತಂದಿದೆ. ಈತ ತಪ್ಪಿಸುವ ವೇಳೆ ವಿದ್ಯುತ್ ಕಡಿತ ಮತ್ತು ಎಲೆಕ್ಟ್ರಿಕ್ ಬೇಲಿಯನ್ನು ನಿಷ್ಕ್ರಿಯಗೊಳಿಸಿರುವುದು ಕೂಡ ಸಂಶಯಕ್ಕೆ ಕಾರಣವಾಗಿದೆ. ಪೊಲೀಸರು ಕೆ-9 ಸ್ಕ್ವಾಡ್ ಬಳಸಿ ಹುಡುಕಾಟ ನಡೆಸಿದ್ದು, ಸ್ಥಳೀಯರು ಅವನನ್ನು ಗುರುತಿಸಿ ಮಾಹಿತಿ ನೀಡಿದ್ದರಿಂದ ಶೀಘ್ರ ಸೆರೆ ಸಾಧ್ಯವಾಯಿತು ಎಂದು ಹೇಳಲಾಗಿದೆ.

ಪಲಾಯನದ ವಿವರಗಳು
ಪಲಾಯನ ಸಮಯ:
ಗುರುವಾರ ತಡರಾತ್ರಿ 1:15ರಿಂದ ಶುಕ್ರವಾರ ಬೆಳಗಿನ ಜಾವ 4:15ರ ನಡುವೆ ಈ ಪಲಾಯನ ನಡೆದಿದೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಜೈಲು ಸಿಬ್ಬಂದಿಗೆ ಈತ ಪರಾರಿಯಾಗಿರುವುದು ಗೊತ್ತಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದಾಗ, ಅವನು ಶರ್ಟ್ ಮತ್ತು ಪ್ಯಾಂಟ್ ಧರಿಸಿ, ಒಂದು ಕೈಯನ್ನು ಪಾಕೆಟ್‌ನಲ್ಲಿ ಮರೆಮಾಚಿ ನಡೆಯುತ್ತಿರುವುದು ಕಂಡುಬಂದಿದೆ.
ಪಲಾಯನ ವಿಧಾನ:
ಜೈಲು ಕಂಬಿಗಳನ್ನು ಕತ್ತರಿಸಿ, ಬೆಡ್‌ಶೀಟ್‌ಗಳಿಂದ ಹಗ್ಗ ತಯಾರಿಸಿ 7.5 ಮೀಟರ್ ಎತ್ತರದ ಗೋಡೆ ಏರಿದ್ದಾನೆ. ಈ ಸಮಯದಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿತ್ತು ಮತ್ತು ಫೆನ್ಸಿಂಗ್ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಈತನಿಗೆ ತಪ್ಪಿಸಿಕೊಳ್ಳಲು ಸುಲಭವಾಗಿದೆ ಎಂದು ಶಂಕಿಸಲಾಗಿದೆ.
ಸೆರೆಯಾಗಿದ್ದು ಹೇಗೆ?
ಸ್ಥಳೀಯರು ಅವನನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ ಕಾರಣ, ಆತ ಸಿಕ್ಕಿಬಿದ್ದಿದ್ದಾನೆ. ಆದರೂ ಆತ ಬಾವಿಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದನಾದರೂ, ಮಾಧ್ಯಮ ಕ್ಯಾಮೆರಾಗಳ ಮುಂದೆಯೇ ಪೊಲೀಸರು ಅವನನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಲಾಯನವು ಜೈಲು ವ್ಯವಸ್ಥೆಯ ಭದ್ರತೆಯ ಬಗ್ಗೆ ವ್ಯಾಪಕ ಟೀಕೆಗೆ ಕಾರಣವಾಗಿದ್ದು, ಸಂಪೂರ್ಣ ತನಿಖೆಗೆ ಆದೇಶಿಸಲಾಗಿದೆ. ಜೈಲು ಅಧಿಕಾರಿಗಳು ಆಂತರಿಕ ತನಿಖೆಯನ್ನು ಪ್ರಾರಂಭಿಸಿದ್ದು, ಘಟನೆ ನಡೆದ ಸಮಯದಲ್ಲಿ ರಾತ್ರಿ ಪಾಳಿಯಲ್ಲಿದ್ದ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಬಗ್ಗೆ ಸೌಮ್ಯಾ ಅವರ ತಾಯಿ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಇದು ಹೊರಗಿನ ಸಹಾಯವಿಲ್ಲದೆ ನಡೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.
ದೇಶವನ್ನೇ ಬೆಚ್ಚಿಬೀಳಿಸಿದ ಸೌಮ್ಯಾ ಪ್ರಕರಣ
ತಮಿಳುನಾಡು ಮೂಲದ ಗೋವಿಂದಚಾಮಿ, ಕೇರಳಕ್ಕೆ ಬರುವ ಮುನ್ನವೇ ತನ್ನ ತವರು ರಾಜ್ಯದಲ್ಲಿ 8 ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದ ಕ್ರಿಮಿನಲ್ ಹಿನ್ನೆಲೆಯುಳ್ಳವನು. ಫೆಬ್ರವರಿ 1, 2011ರಂದು, 23 ವರ್ಷದ ಸೌಮ್ಯಾ ಎರ್ನಾಕುಲಂ-ಶೋರನೂರು ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಗೋವಿಂದಚಾಮಿ ಆಕೆಯನ್ನು ದರೋಡೆ ಮಾಡಿ ಚಲಿಸುತ್ತಿದ್ದ ರೈಲಿನಿಂದ ಹೊರಗೆ ತಳ್ಳಿದ್ದ. ನಂತರ, ರೈಲ್ವೆ ಹಳಿಯ ಬಳಿಯಿದ್ದ ಕಾಡಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಹಲ್ಲೆ ಮಾಡಿ ಕೊಲೆಗೈದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯಾ, ತ್ರಿಶೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 6 ರಂದು ಮೃತಪಟ್ಟಳು. ಈ ಘಟನೆಯು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ನ್ಯಾಯಾಲಯದ ತೀರ್ಪುಗಳು: ಗಲ್ಲು ಶಿಕ್ಷೆಯಿಂದ ಜೀವಾವಧಿಗೆ
ಈ ಪ್ರಕರಣದ ವಿಚಾರಣೆ ನಡೆಸಿದ ತ್ವರಿತಗತಿ ನ್ಯಾಯಾಲಯವು 2012ರಲ್ಲಿ ಗೋವಿಂದಚಾಮಿಯನ್ನು ಅಪರಾಧಿ ಎಂದು ಘೋಷಿಸಿ ಮರಣದಂಡನೆ ವಿಧಿಸಿತು. ಇದನ್ನು 2013ರಲ್ಲಿ ಕೇರಳ ಹೈಕೋರ್ಟ್ ಕೂಡ ಎತ್ತಿಹಿಡಿಯಿತು. ಆದರೆ, 2016ರಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿ, ಗೋವಿಂದಚಾಮಿಯ ಮೇಲಿದ್ದ ಕೊಲೆ ಆರೋಪವನ್ನು ಕೈಬಿಟ್ಟಿತು. ಅತ್ಯಾಚಾರ ಮತ್ತು ಗಾಯಗೊಳಿಸಿದ್ದಕ್ಕಾಗಿ ಅವನ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು. ಈ ತೀರ್ಪು ದೇಶಾದ್ಯಂತ ವ್ಯಾಪಕ ಚರ್ಚೆ ಮತ್ತು ಟೀಕೆಗೆ ಕಾರಣವಾಗಿತ್ತು.