ಭಾರತೀಯ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಕೂಡ ತಂದೆಯಂತೆ ಸ್ಫೋಟಕ ಆಟವಾಡಿ ಮಿಂಚಿದ್ದಾರೆ.
ಭಾರತದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಮಿಂಚಿದ್ದಾರೆ. ದೆಹಲಿ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿದ್ದ ಆರ್ಯವೀರ್, ಸದ್ಯ ಕೂಚ್ ಬೆಹಾರ್ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಅವರು ಮೇಘಾಲಯ ವಿರುದ್ಧ ದೆಹಲಿ ಪರ ಭರ್ಜರಿ ಇನ್ನಿಂಗ್ಸ್ ಕಟ್ಟಿದ್ದಾರೆ.
ಶಿಲ್ಲಾಂಗ್ನ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಕೂಚ್ ಬೆಹಾರ್ ಟ್ರೋಫಿಯಲ್ಲಿ ಆರ್ಯವೀರ್ ಸೆಹ್ವಾಗ್, ಮೇಘಾಲಯ ವಿರುದ್ಧ ದ್ವಿಶತಕ ಸಿಡಿಸಿದ್ದಾರೆ. ತಮ್ಮ ಇನ್ನಿಂಗ್ಸ್ನಲ್ಲಿ 229 ಎಸೆತಗಳನ್ನು ಎದುರಿಸಿದ ಆರ್ಯವೀರ್ 34 ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಿತ 200 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಇದಕ್ಕೂ ಮೊದಲು, ಆರ್ಯವೀರ್ ಅಕ್ಟೋಬರ್ನಲ್ಲಿ ವಿನೂ ಮಂಕಡ್ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿ, ಮಣಿಪುರ ವಿರುದ್ಧ 49 ರನ್ಗಳ ಅದ್ಭುತ ಇನ್ನಿಂಗ್ಸ್ ನಲ್ಲಿ ತಮ್ಮ ತಂಡಕ್ಕೆ ಆರು ವಿಕೆಟ್ಗಳ ಜಯ ತಂದು ಕೊಟ್ಟಿದ್ದರು.
ಈ ಪಂದ್ಯದಲ್ಲಿ ಮೇಘಾಲಯ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತ್ತು. 104.3 ಓವರ್ ಗಳಲ್ಲಿ 260 ರನ್ ಗಳಿಸಿತ್ತು. ನಂತರ ಆರ್ಯವೀರ್ ಸೆಹ್ವಾಗ್ ಮತ್ತು ಅರ್ನವ್ ಬುಗ್ಗಾ ಡೆಲ್ಲಿ ಇನ್ನಿಂಗ್ಸ್ ಆರಂಭಿಸಿದರು. ಅರ್ನವ್ ಬುಗ್ಗಾ ಕೂಡ ಶತಕ ಗಳಿಸಿ 114 ರನ್ ಗಳಿಸಿ ಔಟಾದರು. ಇಬ್ಬರೂ ಆರಂಭಿಕರು ಮೊದಲ ವಿಕೆಟ್ಗೆ 180 ರನ್ ಗಳ ಜೊತೆಯಾಟ ನೀಡಿದರು. ಡೆಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 468 ರನ್ ಗಳಿಸಿ 208 ರನ್ ಮುನ್ನಡೆ ಸಾಧಿಸಿದೆ.