ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಮಾಜಿ ಆಟಗಾರ ಹಾಗೂ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಮೈಸೂರು ವಾರಿಯರ್ಸ್ ಪರ ಮೂರನೇ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ.
ಮಹಾರಾಜ ಟ್ರೋಫಿ ಟಿ20 ಲೀಗ್ ನಲ್ಲಿ ಮೈಸೂರು ವಾರಿಯರ್ಸ್ ಪರ ಸಮಿತ್ ಆಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸಮಿತ್ ಗೆ ಈ ಅವಕಾಶ ಸಿಕ್ಕಿದೆ. ಟೂರ್ನಿಯ ಆರಂಭದಲ್ಲಿ ಸಮಿತ್ ಉತ್ತಮ ಬ್ಯಾಟಿಂಗ್ ಮಾಡುವ ಅವಕಾಶ ಕೈ ಚೆಲ್ಲಿದ್ದರು. ಆದರೆ, ಮೂರನೇ ಪಂದ್ಯದಲ್ಲಿ ಉತ್ತಮ ಲಯ ಕಂಡುಕೊಂಡಿದ್ದಾರೆ.
ಆಡಿದ ಮೊದಲೆರಡು ಪಂದ್ಯಗಳಲ್ಲಿ ಕೇವಲ ಒಂದಂಕಿಗೆ ಔಟ್ ಆಗಿದ್ದ ಸಮಿತ್, ಮೂರನೇ ಪಂದ್ಯದಲ್ಲಿ 33 ರನ್ ಸಿಡಿಸಿದ್ದಾರೆ. 137 ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ ಸಮಿತ್ ದ್ರಾವಿಡ್, 24 ಎಸೆತಗಳಲ್ಲಿ 33 ರನ್ ಗಳಿಸಿದರು. ಈ ವೇಳೆ 4 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಸಿಡಿಸಿದ್ದಾರೆ.
ಆಡಿದ ಮೊದಲೆರಡು ಪಂದ್ಯಗಳಲ್ಲಿ ತಲಾ ಒಂದೊಂದು ಸಿಕ್ಸರ್ ಹಾಗೂ ಬೌಂಡರಿ ಬಾರಿಸಿ ಇನ್ನಿಂಗ್ಸ್ ಮುಗಿಸಿದ್ದ ಸಮಿತ್, ಈ ಪಂದ್ಯದಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದಾರೆ. ಇನ್ನಿಂಗ್ಸ್ ನ 10 ನೇ ಓವರ್ ಬೌಲ್ ಮಾಡಿದ ಲೆಗ್ ಸ್ಪಿನ್ನರ್ ಪ್ರವೀಣ್ ದುಬೆ ಅವರ ಎರಡನೇ ಎಸೆತವನ್ನು ಸಮಿತ್, ಡೀಪ್-ಕವರ್ ಕಡೆ ಅದ್ಭುತ ಸಿಕ್ಸರ್ ಬಾರಿಸಿದರು. ಸದ್ಯ ವಿಡಿಯೋ ಈಗ ವೈರಲ್ ಆಗುತ್ತಿದೆ. ಈ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ 196 ರನ್ ಗಳ ಬೃಹತ್ ಮೊತ್ತ ಕಲೆಹಾಕಿದರೂ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ ಸೋಲು ಕಂಡಿತು.