ಬೆಂಗಳೂರು: ಅಳಿಯನೋರ್ವ ತನ್ನ ಮಾವನನ್ನೇ ಕೊಲೆ ಮಾಡಿರುವ ಘಟನೆ ನಡೆದಿದ್ದು, ಪತ್ನಿ ಹಾಗೂ ಮಗಳು ಶವ ಸುಟ್ಟು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರಿನ (bangaluru) ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದೇವನಹಳ್ಳಿ ಮೂಲದ ಬಾಬು (48) ಸಾವನ್ನಪ್ಪಿರುವ ಮಾವ. ಅಳಿಯ ರಾಮಕೃಷ್ಣ, ಬಾಬು ಪತ್ನಿ ಮುನಿರತ್ನ ಮತ್ತು ಪುತ್ರಿ ಈಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುಟುಂಬ ಹಲವಾರು ವರ್ಷಗಳಿಂದಲೂ ಕಾಡುಗೋಡಿಯಲ್ಲಿ ವಾಸಿಸುತ್ತಿತ್ತು. ಬಾಬು ಗೋದಾಮೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. 3 ತಿಂಗಳ ಹಿಂದೆ ಪ್ರೀತಿಸಿ ರಾಮಕೃಷ್ಣನನ್ನು ಬಾಬು ಪುತ್ರಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇದು ಬಾಬುಗೆ ಇಷ್ಟವಾಗಿರಲಿಲ್ಲ ಎನ್ನಲಾಗಿದೆ. ಇತ್ತೀಚೆಗೆ ಮಗಳು ಹಾಗೂ ಅಳಿಯ ಮನೆಗೆ ಬಂದಿದ್ದ ವೇಳೆ ಬಾಬು ಗಲಾಟೆ ಮಾಡಿದ್ದರು. ಆ ವೇಳೆ ಬಾಬು ತನ್ನ ಪತ್ನಿ ಮುನಿರತ್ನ ಕಪಾಳಕ್ಕೂ ಹೊಡೆದಿದ್ದ. ಅತ್ತೆಗೆ ಹೊಡೆದಿದ್ದನ್ನು ಪ್ರಶ್ನಿಸಿದ್ದ ಅಳಿಯ ರಾಮಕೃಷ್ಣ ಮಾವನ ಕಪಾಳಕ್ಕೆ ಹೊಡೆದಿದ್ದಾನೆ. ಪರಿಣಾಮ ಬಾಬು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಂತರ ಮೂವರೂ ಸೇರಿಕೊಂಡು ಬೆಳಗ್ಗೆ 3ಕ್ಕೆ ಬಾಬು ಮೃತದೇಹವನ್ನು ಆ್ಯಂಬುಲೆನ್ಸ್ನಲ್ಲಿ ಕೋಲಾರಕ್ಕೆ ಸಾಗಿಸಿ, ಕೋಲಾರ ಬಳಿ ಪೆಟ್ರೋಲ್ ಸುರಿದು ಬಾಬು ಶವ ಸುಟ್ಟು ಆರೋಪಿಗಳು ಮನೆಗೆ ಬಂದಿದ್ದಾರೆ.
ಇದೆಲ್ಲವನ್ನು ನೋಡಿದ್ದ ಕಿರಿಮಗಳು ನಾಲ್ಕು ದಿನದ ಬಳಿಕ ಸಂಬಂಧಿಕರ ಬಳಿ ಹೇಳಿದ್ದಾಳೆ. ಬಾಬು ಸಹೋದರ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡ ಕಾಡುಗೋಡಿ ಠಾಣೆ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಆಗ ನಡೆದ ಸಂಗತಿ ಬಯಲಿಗೆ ಬಂದಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.