ಬೆಂಗಳೂರು: ಸಮೀಕ್ಷೆಯಲ್ಲಿ ಪಾಲ್ಗೊಳ್ಳದಿದ್ದರೆ ಸಿಎಂ ಕ್ರಮ ಕೈಗೊಳ್ಳುವ ಧಮ್ಕಿ ಹಾಕಿದ್ದಾರೆ. ಮೊದಲು ಗಣತಿದಾರರು, ಶಿಕ್ಷಕರ ಸಮಸ್ಯೆ ಬಗೆಹರಿಸಿ ಎಂದು ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಸಿ.ಟಿ ರವಿ, ಸಮೀಕ್ಷೆ ಆಪ್‌ನಲ್ಲಿ ಸಮಸ್ಯೆ ಇದೆ, ಒಟಿಪಿ ಸಮಸ್ಯೆ ಇದೆ, ಸೀರಿಯಲ್ ಪ್ರಕಾರ ಮನೆಗಳನ್ನು ಕೊಟ್ಟಿಲ್ಲ, ಪ್ರಾಂತ್ಯವಾರು ಶಿಕ್ಷಕರ ನಿಯೋಜನೆ ಆಗಿಲ್ಲ, ಎಲ್ಲೋ ಇರುವವರನ್ನು ಇನ್ನೆಲ್ಲೋ ಸಮೀಕ್ಷೆಗೆ ಹಾಕಿದ್ದಾರೆ. ಪೂರ್ವ ತಯಾರಿ ಮಾಡಿಕೊಳ್ಳದೇ ಸಮೀಕ್ಷೆ ನಡೆಯುತ್ತಿದೆ. ಪ್ರಾಯೋಗಿಕ ಸಮೀಕ್ಷೆ ಮಾಡದೇ ನೇರವಾಗಿ ಫೀಲ್ಡ್‌ನಲ್ಲಿ ಸಮೀಕ್ಷೆಗೆ ಮುಂದಾಗಿದ್ದಾರೆ. 60 ಪ್ರಶ್ನೆಗಳಿಗೆ ಉತ್ತರಿಸಲು ಜನಕ್ಕೆ ತಾಳ್ಮೆ ಇರುವುದಿಲ್ಲ, ಆದರೆ ಅಷ್ಟೂ ಪ್ರಶ್ನೆಗಳಿಗೆ ಉತ್ತರ ಭರ್ತಿ ಮಾಡಬೇಕು. ಇದರಿಂದ ಒಂದೊಂದು ಸಮೀಕ್ಷೆ ಪ್ರತಿ ಭರ್ತಿಗೆ 1.5 ರಿಂದ 2 ಗಂಟೆ ಬೇಕು. ಎಲ್ಲರಿಗೂ ತಾಂತ್ರಿಕ ಜ್ಞಾನ ಇರುವುದಿಲ್ಲ, ಇದನ್ನು ಸರ್ಕಾರ ಗಮನಿಸಬೇಕಿತ್ತು ಎಂದಿದ್ದಾರೆ.
ನೆಟ್ವರ್ಕ್ ಸಮಸ್ಯೆ, ಅಪ್‌ಲೋಡ್ ಸಮಸ್ಯೆ, ಒಟಿಪಿ ವಿಳಂಬ ಸಮಸ್ಯೆ ಇವೆ. ಇವೆಲ್ಲ ಸಮಸ್ಯೆ ಮೊದಲು ಸರಿಪಡಿಸಿ ನಂತರ ಸಮೀಕ್ಷೆ ಮಾಡಿ. ಪೂರ್ವಸಿದ್ಧತೆ ಮಾಡಿಕೊಂಡು ಸಮೀಕ್ಷೆ ಮಾಡಿ. ಸಿಎಂ ಅವರು ಸಮಸ್ಯೆ ಬಗೆಹರಿಸದೇ ಧಮ್ಕಿ ಹಾಕುವುದು ಸರಿಯಲ್ಲ. ಧಮ್ಕಿಯಿಂದ ಕೆಲಸ ಆಗಲ್ಲ. ಇವೆಲ್ಲ ಸಮಸ್ಯೆಗಳಿಂದ ಗಣತಿದಾರರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಕಿಡಿಕಾರಿದ್ದಾರೆ.
ಐ ಲವ್ ಮುಹಮ್ಮದ್ ವರ್ಸಸ್ ಐ ಲವ್ ಮಹಾದೇವ ಪೋಸ್ಟರ್ ವಿಚಾರವಾಗಿ ಮಾತನಾಡಿ, ಐ ಲವ್ ಮುಹಮ್ಮದ್ ಎಂದು ಅವರು ಮಹಾದೇವ ಎಂದು ಇವರು ಶುರು ಮಾಡಿದ್ದಾರೆ. ಈಗ ಏಕಾಏಕಿ ಮಹಮದ್ ಮೇಲೇನು ಲವ್? ಈ ಲವ್ ಮೊದಲು ಇರಲಿಲ್ವಾ? ಇದರ ಹಿಂದೆ ಏನೋ ಷಡ್ಯಂತ್ರ ಇದೆ. ಕೇಂದ್ರ, ರಾಜ್ಯ ಗುಪ್ತಚರ ದಳ ಇದರ ಬಗ್ಗೆ ನಿಗಾ ಇಡಬೇಕು ಎಂದ ಹೇಳಿದ್ದಾರೆ.