ಶ್ರೀನಗರ: ‘ಆಪರೇಷನ್ ಸಿಂದೂರ’ದ ಬಳಿಕ ಗಡಿಯಲ್ಲಿ ತುಸು ತಿಳಿಯಾಗಿದ್ದ ವಾತಾವರಣ ಮತ್ತೆ ಉದ್ವಿಗ್ನಗೊಂಡಿದೆ. ಪಾಕಿಸ್ತಾನ ಸೇನೆ ಬೆಂಬಲಿತ ಉಗ್ರರು ಜಮ್ಮು ಮತ್ತು ಕಾಶ್ಮೀರದ ಉರಿ ವಲಯದ ಗಡಿ ನಿಯಂತ್ರಣ ರೇಖೆಯ ಬಳಿ ಭಾರತದೊಳಕ್ಕೆ ನುಸುಳಲು ಯತ್ನಿಸಿದ್ದು, ಇದನ್ನು ಭಾರತೀಯ ಸೇನೆಯು ವಿಫಲಗೊಳಿಸಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಆಗಸ್ಟ್ 12ರ ಮಂಗಳವಾರ ತಡರಾತ್ರಿ, ಪಾಕಿಸ್ತಾನ ಸೇನೆಯ ಗುಂಡಿನ ದಾಳಿಯ ಬೆಂಬಲದೊಂದಿಗೆ ಉಗ್ರರು ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸಿದ್ದರು. ಇದನ್ನು ಗಮನಿಸಿದ ನಮ್ಮ ಯೋಧರು ತಕ್ಷಣವೇ ಪ್ರತಿ ದಾಳಿ ನಡೆಸಿದ್ದಾರೆ. ಈ ವೇಳೆ ಎರಡೂ ಕಡೆ ತೀವ್ರ ಗುಂಡಿನ ಚಕಮಕಿ ನಡೆದಿದ್ದು, ಭಾರತದ ಯೋಧ ಗಂಭೀರವಾಗಿ ಗಾಯಗೊಂಡಿದ್ದು, ನಂತರ ಹುತಾತ್ಮರಾದರು. ಸೇನೆಯ ದಿಟ್ಟ ಉತ್ತರದಿಂದಾಗಿ ನುಸುಳುಕೋರರ ಪ್ರಯತ್ನ ವಿಫಲವಾಯಿತು, ಆದರೆ ಅವರು ಪ್ರತಿಕೂಲ ಹವಾಮಾನದ ಲಾಭ ಪಡೆದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯ ಕುರಿತು ಸೇನೆಯಿಂದ ಅಧಿಕೃತ ಹೇಳಿಕೆ ಇನ್ನಷ್ಟೇ ಹೊರಬೀಳಬೇಕಿದೆ.
ಈ ದಾಳಿಯು ಸಾಮಾನ್ಯ ನುಸುಳುಕೋರ ಯತ್ನಕ್ಕಿಂತ ಭಿನ್ನವಾಗಿದ್ದು, ಪಾಕಿಸ್ತಾನ ಸೇನೆಯ ಕುಖ್ಯಾತ ‘ಬಾರ್ಡರ್ ಆ್ಯಕ್ಷನ್ ಟೀಮ್’ (BAT) ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
‘ಆಪರೇಷನ್ ಸಿಂದೂರ’ ನಂತರದ ಮೊದಲ ದೊಡ್ಡ ಪ್ರಚೋದನೆ
ಏಪ್ರಿಲ್ 22, 2025ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರ ಹತ್ಯೆ ನಡೆದಿತ್ತು. ಇದಕ್ಕೆ ಪ್ರತಿಯಾಗಿ ಭಾರತವು ‘ಆಪರೇಷನ್ ಸಿಂದೂರ’ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ನಿರ್ದಿಷ್ಟ ವೈಮಾನಿಕ ದಾಳಿಗಳನ್ನು ನಡೆಸಿ, ಉಗ್ರರ ಅಡಗುತಾಣಗಳು, ನೆಲೆಗಳನ್ನು ನಾಶ ಮಾಡಿತ್ತು.
ಈ ಕಾರ್ಯಾಚರಣೆಯ ನಂತರ, ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಬಳಿಕ ಪಾಕಿಸ್ತಾನದ ಮನವಿಯ ಮೇರೆಗೆ ಮೇ 10, 2025 ರಂದು ಕದನ ವಿರಾಮಕ್ಕೆ ಒಪ್ಪಿಕೊಳ್ಳಲಾಗಿತ್ತು. ಅಂದಿನಿಂದ ತುಲನಾತ್ಮಕವಾಗಿ ಶಾಂತವಾಗಿದ್ದ ಗಡಿಯಲ್ಲಿ, ಇದೀಗ ನಡೆದಿರುವ ಈ ದಾಳಿಯು ಪಾಕಿಸ್ತಾನದ ಮೊದಲ ಪ್ರಮುಖ ಪ್ರಚೋದನಕಾರಿ ಕೃತ್ಯ ಎಂದು ಹೇಳಲಾಗಿದೆ.
ಇತ್ತೀಚೆಗಷ್ಟೇ ಅಮೆರಿಕ ಪ್ರವಾಸದಲ್ಲಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಭಾರತದ ಮೇಲೆ ಅಣ್ವಸ್ತ್ರ ಬಳಸುವಂತಹ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದರು. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದ ಭಾರತ, “ಪಾಕಿಸ್ತಾನದ ಪರಮಾಣು ಬೆದರಿಕೆಗೆ ಭಾರತ ಬಗ್ಗುವುದಿಲ್ಲ ಮತ್ತು ತನ್ನ ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ” ಎಂದು ಹೇಳಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಗಡಿಯಲ್ಲಿ ಗುಂಡಿನ ಸದ್ದು ಕೇಳಿಬರಲಾರಂಭಿಸಿದೆ.