ನವದೆಹಲಿ: ಇದೇ ಶನಿವಾರ ಅಂದರೆ ಮಾರ್ಚ್ 29ರಂದು ಭಾಗಶಃ ಸೂರ್ಯಗ್ರಹಣ(Solar eclipse) ಸಂಭವಿಸಲಿದ್ದು, ಇದು ಪ್ರಸಕ್ತ ವರ್ಷದ (2025) ಮೊದಲ ಸೂರ್ಯಗ್ರಹಣವಾಗಿದೆ.
ಚಂದ್ರನು ಭೂಮಿಗೆ ಸಮೀಪಿಸಿ, ಭೂಮಿ ಮತ್ತು ಸೂರ್ಯನ ನಡುವೆ ನೇರವಾಗಿ ಹಾದುಹೋಗುವ ವೇಳೆ, ಸೂರ್ಯನ ಬೆಳಕಿಗೆ ತಡೆಯುಂಟಾಗಿ, ಅದರ ನೆರಳು ಭೂಮಿಯ ಮೇಲ್ಮೈ ಮೇಲೆ ಬೀರುವಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಶನಿವಾರ ಸಂಭವಿಸಲಿರುವುದು ಭಾಗಶಃ ಸೂರ್ಯಗ್ರಹಣವಾಗಿದ್ದು, ಸೂರ್ಯನ ಒಂದು ಭಾಗವನ್ನು ಮಾತ್ರ ಆವರಿಸಿರುತ್ತದೆ. ಈ ಭಾಗಶಃ ಸೂರ್ಯಗ್ರಹಣವು ಯುರೋಪ್, ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ ಮತ್ತು ಆರ್ಕ್ಟಿಕ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗೋಚರಿಸಲಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.
ಭಾರತದಿಂದ ಗೋಚರಿಸಲಿದೆಯೇ?:
ಈ ಬಾರಿಯ ಸೂರ್ಯಗ್ರಹಣದ ಸಂದರ್ಭದಲ್ಲಿ ಚಂದ್ರನ ನೆರಳು ಭಾರತವನ್ನು ದಾಟುವುದಿಲ್ಲವಾದ್ದರಿಂದ ಶನಿವಾರದ ಭಾಗಶಃ ಸೂರ್ಯಗ್ರಹಣವು ಭಾರತದಿಂದ ಗೋಚರಿಸುವುದಿಲ್ಲ ಎಂದು ನಾಸಾ ತಿಳಿಸಿದೆ.
ಎಲ್ಲಿ ಮತ್ತು ಯಾವಾಗ ವೀಕ್ಷಿಸಬಹುದು?:
ಮಾರ್ಚ್ 29ರ ಮುಂಜಾನೆ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದ್ದು, ನ್ಯೂಯಾರ್ಕ್ ನಗರ, ಬೋಸ್ಟನ್, ಮಾಂಟ್ರಿಯಲ್ ಮತ್ತು ಕ್ವಿಬೆಕ್‌ನಂತಹ ಪ್ರದೇಶಗಳ ಮೇಲೆ ತನ್ನ ಛಾಯೆಯನ್ನು ಬೀರಲಿದೆ. ಆಫ್ರಿಕಾ, ಸೈಬೀರಿಯಾ, ಕೆರಿಬಿಯನ್ ಮತ್ತು ಯುರೋಪಿನ ಕೆಲವು ಭಾಗಗಳಲ್ಲೂ ಭಾಗಶಃ ಗ್ರಹಣವನ್ನು ನೋಡಲು ಸಾಧ್ಯವಾಗುತ್ತದೆ. ಅಮೆರಿಕದಲ್ಲಿ ಗ್ರಹಣವು ಮುಂಜಾನೆ 4:50ಕ್ಕೆ ಪ್ರಾರಂಭವಾಗುತ್ತದೆ. ಬೆಳಿಗ್ಗೆ 6:47ಕ್ಕೆ ಅದು ಉತ್ತುಂಗ ಸ್ಥಿತಿ ತಲುಪಿ, 8:43ರ ವೇಳೆಗೆ ಕೊನೆಗೊಳ್ಳುತ್ತದೆ.
ಭಾರತದಲ್ಲಿ ಎಷ್ಟು ಗಂಟೆಗೆ ಗ್ರಹಣ?
ಭಾರತದಲ್ಲಿ, ಸೂರ್ಯಗ್ರಹಣವು ಮಧ್ಯಾಹ್ನ 2:20ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸಂಜೆ 6:13ಕ್ಕೆ ಕೊನೆಗೊಳ್ಳುತ್ತದೆ. ಒಟ್ಟಾರೆಯಾದ ಇದು ಸುಮಾರು ನಾಲ್ಕು ಗಂಟೆಗಳ ಕಾಲ ಇರಲಿದೆ. ಸಂಜೆ 04:17ಕ್ಕೆ ಗ್ರಹಣವು ಉತ್ತುಂಗದಲ್ಲಿರಲಿದೆ. ಆದಾಗ್ಯೂ, ಸಮಯದ ವ್ಯತ್ಯಾಸದಿಂದಾಗಿ ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ.
ಸೂರ್ಯಗ್ರಹಣ 2025: ವೀಕ್ಷಿಸುವುದು ಹೇಗೆ?
ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ಸುರಕ್ಷಿತವಾಗಿ ವೀಕ್ಷಿಸಬಹುದು. ಆದರೆ, ಸೂರ್ಯಗ್ರಹಣವನ್ನು ನೇರವಾಗಿ ವೀಕ್ಷಿಸಲಾಗದು. ಒಂದು ವೇಳೆ ಬರಿಗಣ್ಣಿನಿಂದ ಸೂರ್ಯನನ್ನು ವೀಕ್ಷಿಸಲು ಹೋದರೆ, ರೆಟಿನಾಗೆ ಸುಟ್ಟಗಾಯಗಳಾಗುವ ಮತ್ತು ಕಣ್ಣಿನ ಹಾನಿ ಉಂಟುಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಸೂರ್ಯಗ್ರಹಣವನ್ನು ವೀಕ್ಷಿಸುವಾಗ ಕಣ್ಣುಗಳಿಗೆ ಸೂಕ್ತ ರಕ್ಷಣೆ ನೀಡುವಂಥ ಕನ್ನಡಕಗಳನ್ನು ಧರಿಸುವಂತೆ ಸಲಹೆ ನೀಡಲಾಗಿದೆ.
ವಿಶೇಷವೆಂದರೆ, 2025ರಲ್ಲಿ ಎರಡು ಸೂರ್ಯಗ್ರಹಣಗಳಿಗೆ ಖಗೋಳ ಜಗತ್ತು ಸಾಕ್ಷಿಯಾಗಲಿದೆ ಎಂದು ನಾಸಾ ಹೇಳಿದೆ. ಮೊದಲನೆಯದು ಮಾರ್ಚ್ 29ರಂದು ನಿಗದಿಯಾಗಿದ್ದು, ಎರಡನೆಯದು ಸೆಪ್ಟೆಂಬರ್ 21 ರಂದು ನಡೆಯುವ ಸಾಧ್ಯತೆಯಿದೆ.