ಬೆಳಗಾವಿ : ಪೂಜಾ ಸ್ಥಳಗಳ ಪ್ರವೇಶಕ್ಕೆ ಅಡ್ಡಿಪಡಿಸುವುದು, ಜಾತಿ ಅಥವಾ ಸಮುದಾಯಗಳ ಪಂಚಾಯತ್ ಸೇರಿದಂತೆ ರಾಜ್ಯದಲ್ಲಿ ಒಬ್ಬ ವ್ಯಕ್ತಿ ಅಥವಾ ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿಗಳ ಗುಂಪು ಗುರಿಯಾಗಿಸಿಕೊಂಡು ಸಾಮಾಜಿಕವಾಗಿ ಬಹಿಷ್ಕರಿಸಿದರೆ ಅಂತವರಿಗೆ ಗರಿಷ್ಠ 3 ವರ್ಷದ ವರೆಗಿನ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ಗಳ ವರೆಗೆ ದಂಡ ವಿಧಿಸಲು ಪ್ರಸ್ತಾವಿಸಲಾಗಿರುವ ಮಹತ್ವದ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ(ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025’ ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಇಂದು ವಿಧಾನಸಭೆಯಲ್ಲಿ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ(ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಮಸೂದೆ, 2025’ ಅನ್ನು ಮಂಡಿಸಿದ್ದು, ಅದರಲ್ಲಿ 20 ರೀತಿಯ ಸಾಮಾಜಿಕ ಬಹಿಷ್ಕಾರಗಳನ್ನು ಪಟ್ಟಿ ಮಾಡಿದ್ದಾರೆ.
ಮಸೂದೆಯಲ್ಲಿ ಯಾವುದೇ ವ್ಯಕ್ತಿ, ಕುಟುಂಬದೊಂದಿಗೆ ವ್ಯವಹರಿಸಲು ನಿರಾಕರಿಸುವುದು, ಅವರ ಕೆಲಸ ಮಾಡಲು ಅಥವಾ ವ್ಯಾಪಾರ ಮಾಡಲು ನಿರಾಕರಿಸುವುದು; ಸೇವೆಗಳನ್ನು ನಿರಾಕರಿಸಿದರೆ ಜೈಲು ಶಿಕ್ಷ ಗ್ಯಾರಂಟಿ ಎಂದು ಹೇಳಲಾಗಿದೆ.
ರಾಜ್ಯದ ವಿವಿಧ ಸಮುದಾಯಗಳಲ್ಲಿ ಸಾಮಾಜಿಕ ಬಹಿಷ್ಕಾರ ಹಾಕುವುದು, ಜಾತಿ ಸಭೆ ಅಥವಾ ಸಮುದಾಯ ಪಂಚಾಯತ್‌ಗಳ ಮೂಲಕ ವಿವಿಧ ಶಿಕ್ಷೆಗಳನ್ನು ವಿಧಿಸುವ ಅಸಂವಿಧಾನಿಕ ಪದ್ಧತಿಗಳು ಇನ್ನೂ ಆಚರಣೆಯಲ್ಲಿವೆ. ಇದರ ಪರಿಣಾಮವಾಗಿ ವ್ಯಕ್ತಿಗಳು ಅಥವಾ ಕುಟುಂಬ ತಮ್ಮ ಜೀವನವನ್ನು ಘನತೆಯಿಂದ ನಡೆಸುವಲ್ಲಿ ಹೆಚ್ಚಿನ ಕಿರುಕುಳ ಅನುಭವಿಸುತ್ತಾರೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಅರುಣಾಚಲ ಪ್ರದೇಶದಲ್ಲಿ ಘೋರ ದುರಂತ | ಟ್ರಕ್ ಕಂದಕಕ್ಕೆ ಉರುಳಿ 22 ಕಾರ್ಮಿಕರು ಸಾವು



















