ಮ್ಯಾಂಚೆಸ್ಟರ್: 2026ರ ಸಾಲಿನ ಪ್ರತಿಷ್ಠಿತ ‘ದಿ ಹಂಡ್ರೆಡ್’ ಕ್ರಿಕೆಟ್ ಟೂರ್ನಿಗೆ ಭಾರತದ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರನ್ನು ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ (ಹಿಂದಿನ ಮ್ಯಾಂಚೆಸ್ಟರ್ ಒರಿಜಿನಲ್ಸ್) ತಂಡಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ.
ಸಂಜೀವ್ ಗೋಯೆಂಕಾ ಅವರ ಆರ್‌ಪಿಎಸ್‌ಜಿ ಸಮೂಹವು ಈ ಫ್ರಾಂಚೈಸಿಯ ಶೇ. 70 ರಷ್ಟು ಪಾಲನ್ನು ಸುಮಾರು 80 ಮಿಲಿಯನ್ ಪೌಂಡ್‌ಗಳಿಗೆ ಖರೀದಿಸಿದ ನಂತರ, ತಂಡವನ್ನು ಅಧಿಕೃತವಾಗಿ ‘ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್’ ಎಂದು ಮರುನಾಮಕರಣ ಮಾಡಲಾಗಿದೆ. ಈ ಬದಲಾವಣೆಯ ಬೆನ್ನಲ್ಲೇ ತಂಡವು ಪ್ರಮುಖ ಆಟಗಾರರ ಸೇರ್ಪಡೆ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.
ತಾರಾ ಆಟಗಾರ್ತಿಯರ ದಂಡು:
ಕಳೆದ 2025ರ ಋತುವಿನಲ್ಲಿ ಭಾರತ ಮಹಿಳಾ ತಂಡವು ಚೊಚ್ಚಲ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಎಡಗೈ ಬ್ಯಾಟರ್ ಸ್ಮೃತಿ ಮಂಧಾನ, ಈಗ ಮ್ಯಾಂಚೆಸ್ಟರ್ ತಂಡದ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಅವರು ಆಸ್ಟ್ರೇಲಿಯಾದ ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಇಂಗ್ಲೆಂಡ್‌ನ ಸ್ಪಿನ್ ಮೋಡಿಗಾರ್ತಿ ಸೋಫಿ ಎಕ್ಲೆಸ್ಟೋನ್ ಅವರೊಂದಿಗೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪುರುಷರ ತಂಡದಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ಹೆನ್ರಿಕ್ ಕ್ಲಾಸೆನ್, ಲಿಯಾಮ್ ಡಾಸನ್ ಮತ್ತು ನೂರ್ ಅಹ್ಮದ್ ಅವರುಗಳು ಮುಂದುವರಿಯಲಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ.
ಮಾಲೀಕರ ಮಾತು:
ಈ ಬಗ್ಗೆ ಎಕ್ಸ್ (ಟ್ವಿಟರ್) ತಾಣದಲ್ಲಿ ಬರೆದುಕೊಂಡಿರುವ ತಂಡದ ಸಹ-ಮಾಲೀಕ ಸಂಜೀವ್ ಗೋಯೆಂಕಾ, “ಮ್ಯಾಂಚೆಸ್ಟರ್ ಕ್ರೀಡೆ, ಉತ್ಸಾಹ ಮತ್ತು ಪರಂಪರೆಗೆ ಹೆಸರಾದ ನಗರವಾಗಿದೆ. ಜಾಗತಿಕವಾಗಿ ಸೂಪರ್ ಜೈಂಟ್ಸ್ ಕುಟುಂಬ ಬೆಳೆಯುತ್ತಿದ್ದು, ಜೋಸ್ ಬಟ್ಲರ್ ಮತ್ತು ಸ್ಮೃತಿ ಮಂಧಾನ ತಂಡದ ಪ್ರಮುಖ ಮುಖಗಳಾಗಲಿದ್ದಾರೆ,” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇತರೆ ಐಪಿಎಲ್ ತಂಡಗಳ ಲಗ್ಗೆ:
ಕೇವಲ ಮ್ಯಾಂಚೆಸ್ಟರ್ ಮಾತ್ರವಲ್ಲದೆ, ಇಂಗ್ಲೆಂಡ್‌ನ ಈ ಟೂರ್ನಿಯಲ್ಲಿ ಇತರೆ ಐಪಿಎಲ್ ಫ್ರಾಂಚೈಸಿಗಳೂ ತಮ್ಮ ಛಾಪು ಮೂಡಿಸಿವೆ. ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದಲ್ಲಿ ‘ಓವಲ್ ಇನ್ವಿನ್ಸಿಬಲ್ಸ್’ ತಂಡವು ‘ಎಂಐ ಲಂಡನ್’ ಎಂದು ಮತ್ತು ಸನ್ ಗ್ರೂಪ್ ಒಡೆತನದ ‘ನಾರ್ದರ್ನ್ ಸೂಪರ್‌ಚಾರ್ಜರ್ಸ್’ ತಂಡವು ‘ಸನ್‌ರೈಸರ್ಸ್ ಲೀಡ್ಸ್’ ಎಂದು ಮರುನಾಮಕರಣಗೊಂಡಿವೆ. 2026ರ ‘ದಿ ಹಂಡ್ರೆಡ್’ ಟೂರ್ನಿಯು ಜುಲೈ 21 ರಿಂದ ಆಗಸ್ಟ್ 16 ರವರೆಗೆ ನಡೆಯಲಿದೆ.
ಇದನ್ನೂ ಓದಿ: ರೋಹಿತ್ ಶರ್ಮಾ ಭವಿಷ್ಯ ಮಸುಕು | 2027ರ ವಿಶ್ವಕಪ್ ಕನಸಿಗೆ ಪೆಟ್ಟು ನೀಡಿದ ರಾಜಕೋಟ್ ವೈಫಲ್ಯ!



















