ಬೆಂಗಳೂರು: ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಅಕ್ರಮದ ಆರೋಪ ಕೇಳಿ ಬಂದಿದೆ. ರಾಜ್ಯ ಸರ್ಕಾರಿ ನೌಕರರ ನೇಮಕಾತಿಗೆ ಸಂಬಂಧಿಸಿದ ಕೆಎಎಸ್ ‘ಎ’ ಮತ್ತು ‘ಬಿ’ ವೃಂದದ ಪರೀಕ್ಷಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ KPSC ವಿರುದ್ಧ ಅಕ್ರಮದ ಆರೋಪಗಳು ಕೇಳಿಬಂದಿವೆ.
2023-24ನೇ ಸಾಲಿನಲ್ಲಿ 384 ಹುದ್ದೆಗಳ ನೇಮಕಾತಿಗಾಗಿ ನಡೆದಿದ್ದ ಪರೀಕ್ಷೆಗೆ ಸಂಬಂಧಿಸಿದಂತೆ 2024ರ ಫೆಬ್ರವರಿ 26ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಬಳಿಕ ಪ್ರಾಥಮಿಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಅನುವಾದದಲ್ಲಿ ಎಡವಟ್ಟು ಕಂಡುಬಂದ ಹಿನ್ನೆಲೆ ರಾಜ್ಯ ಸರ್ಕಾರ ಪರೀಕ್ಷೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸಲು ಸೂಚಿಸಿತ್ತು. ಅದರಂತೆ 2025ರ ಮೇ ತಿಂಗಳಲ್ಲಿ ಮರುಪರೀಕ್ಷೆ ನಡೆದಿತ್ತು. ಇದೀಗ 1:3 ಅನುಪಾತದಲ್ಲಿ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಎಸ್ಸಿ ಪ್ರಕಟಿಸಿದೆ. ಆದರೆ ಫಲಿತಾಂಶ ಪ್ರಕಟವಾದ ತಕ್ಷಣವೇ ಹಲವು ಅನುಮಾನಗಳು ವ್ಯಕ್ತವಾಗಿವೆ.
ಒಂದೇ ಪರೀಕ್ಷಾ ಕೇಂದ್ರದ ಅಭ್ಯರ್ಥಿಗಳು ಸಾಲುಸಾಲಾಗಿ ಆಯ್ಕೆಯಾಗಿರುವುದು, ಒಂದೇ ಕೊಠಡಿಯಲ್ಲಿ ಮೈನ್ಸ್ ಬರೆದಿದ್ದ 15 ಮಂದಿ ಆಯ್ಕೆಯಾಗಿರುವುದು, ಸೀರಿಯಲ್ ನಂಬರ್ ಕ್ರಮದಲ್ಲಿ ಅಭ್ಯರ್ಥಿಗಳು ಸೆಲೆಕ್ಟ್ ಆಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಲ್ಲದೆ ಒಂದೇ ಕುಟುಂಬದ ಇಬ್ಬರು, ಮೂವರು ಆಯ್ಕೆಯಾಗಿರುವ ಬಗ್ಗೆ ಕೂಡ ಅನುಮಾನ ವ್ಯಕ್ತಪಡಿಸಲಾಗಿದೆ.
ಪ್ರಭಾವಿಗಳ ಮಕ್ಕಳಿಗೆ ಸೀಟ್ ಕೊಡಿಸಲು ಕುತಂತ್ರ ನಡೆದಿದೆ ಎಂಬ ಆರೋಪವೂ ಕೇಳಿಬಂದಿದ್ದು, ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತವಾಗಿದೆ. ಫಲಿತಾಂಶ ಅಕ್ರಮವಾಗಿದೆ ಎಂದು ಆರೋಪಿಸಿ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನಮಂತ್ರಿ ಮೋದಿ ಅವರನ್ನು ಟ್ಯಾಗ್ ಮಾಡಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.
ಕೆಪಿಎಸ್‌ಸಿ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಹಾಗೂ ಪಾರದರ್ಶಕತೆಗಾಗಿ ಸ್ವತಂತ್ರ ಸಮಿತಿ ರಚಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ನಾವು ಉತ್ತಮವಾಗಿ ಪರೀಕ್ಷೆ ಬರೆದಿದ್ದರೂ ಆಯ್ಕೆ ಆಗಿಲ್ಲ. ಒಂದೇ ಕೊಠಡಿಯ ಚ ಮಂದಿ ಆಯ್ಕೆಯಾಗಿದ್ದು ಹೇಗೆ? ಎಂದು ಪ್ರಶ್ನಿಸುತ್ತಿರುವ ಅಭ್ಯರ್ಥಿಗಳು ನ್ಯಾಯಸಮ್ಮತ ತನಿಖೆಗಾಗಿ ಆಗ್ರಹಿಸಿದ್ದಾರೆ. ಫಲಿತಾಂಶ ಇದೀಗ ವಿದ್ಯಾರ್ಥಿಗಳ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಇದನ್ನೂ ಓದಿ : MBBS ಮುಗಿಸಿದವರಿಗೆ ಗುಡ್ ನ್ಯೂಸ್ | 31 ಜೂನಿಯರ್ ರೆಸಿಡೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ



















