ಬೆಂಗಳೂರು: ಎಸ್.ಎಂ. ಕೃಷ್ಣ ಅವರು ಅಕ್ಷರ ಹಾಗೂ ಆರೋಗ್ಯಕ್ಕೆ ಒತ್ತು ನೀಡಿದವರು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣ ಅವರ ಸರ್ಕಾರದದಲ್ಲಿ ನಾನು ಸಹಕಾರಿ ಮತ್ತು ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದೆ. ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸುತ್ತಿದ್ದರು. ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಿ, ನಂತರ ನಿರ್ಣಯ ಕೈಗೊಳ್ಳುತ್ತಿದ್ದರು. ಸಂಪುಟದ ಸದಸ್ಯರಿಗೆ ಹೆಚ್ಚಿನ ಅವಕಾಶ ಮತ್ತು ಅಧಿಕಾರವನ್ನು ನೀಡಿದ್ದರು. ಸರ್ಕಾರ ಹೆಸರು ಹಾಗೂ ವೈಯಕ್ತಿಕವಾಗಿ ಹೆಸರು ಕಡೆದಂತೆ ಕೆಲಸ ಮಾಡಬೇಕು ಎಂದು ಹಿತ ವಚನ ಹೇಳಿ ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ ನೀಡುತ್ತಿದ್ದರು ಎಂದಿದ್ದಾರೆ.
ಸಹಕಾರಿ ಸಚಿವನಾಗಿದ್ದಾಗ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯ ಬಗ್ಗೆ ನಾವು ಅವರಿಗೆ ವಿವರಣೆ ನೀಡಿದಾಗ ಸಂತಸಗೊಂಡು ಜಾರಿಗೊಳಿಸಲು ಅನುಮತಿ ನೀಡಿದ್ದರು. ನನ್ನ ಸರ್ಕಾರದ ಆದ್ಯತೆ ಅಕ್ಷರ ಮತ್ತು ಆರೋಗ್ಯ. ಅಕ್ಷರದ ದೊಡ್ಡ ಕ್ರಾಂತಿ ಅವರ ಕಾಲದಲ್ಲಿ ನಡೆದಿದೆ. ಮಕ್ಕಳಿಗೆ ಅಕ್ಷರ ಕೊಟ್ಟರು ಹಾಗೂ ಅನ್ನ ಕೊಟ್ಟರು. ಬಿಸಿ ಊಟದಿಂದ 84 ಲಕ್ಷ ಮಕ್ಕಳು ಊಟ ಮಾಡುವಂತಾಯಿತು ಎಂದಿದ್ದಾರೆ.