ನವದೆಹಲಿ: 2020ರ ದೆಹಲಿ ದಂಗೆ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ, ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿವಾದಾತ್ಮಕ ಘೋಷಣೆಗಳನ್ನು ಕೂಗಲಾಗಿದೆ.
ಸೋಮವಾರ ರಾತ್ರಿ 9 ರಿಂದ 10 ಗಂಟೆಯ ಸುಮಾರಿಗೆ ಜೆಎನ್‌ಯುನ ಸಾಬರಮತಿ ಹಾಸ್ಟೆಲ್ ಬಳಿ ಜಮಾಯಿಸಿದ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಹೆಸರನ್ನು ಉಲ್ಲೇಖಿಸಿ ಆಕ್ಷೇಪಾರ್ಹ ಮತ್ತು ಬೆದರಿಕೆ ಒಡ್ಡುವಂತಹ ಘೋಷಣೆಗಳನ್ನು ಕೂಗಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೆಎನ್‌ಯು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ದಾನಿಶ್ ಮತ್ತು ಸುನಿಲ್ ಈ ವೇಳೆ ಸ್ಥಳದಲ್ಲಿದ್ದರು ಎನ್ನಲಾಗಿದೆ.
ಬಿಜೆಪಿ ಟೀಕೆ: ಈ ಘಟನೆಯನ್ನು ಖಂಡಿಸಿರುವ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ, “ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧವೇ ಇವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರೆ ಇವರಿಗೆ ದೇಶದ ಮೇಲೆ ನಂಬಿಕೆ ಇಲ್ಲ ಎಂದರ್ಥ. ಇವರು ಭಾರತವನ್ನು ಒಡೆಯಲು ಬಯಸುವವರು,” ಎಂದು ಕಿಡಿಕಾರಿದ್ದಾರೆ.
ದೂರು ದಾಖಲಿಸಲು ಎಬಿವಿಪಿ ನಿರ್ಧಾರ: ಎಡಪಂಥೀಯ ವಿದ್ಯಾರ್ಥಿಗಳು ಆರ್‌ಎಸ್ಎಸ್, ಎಬಿವಿಪಿ ಮತ್ತು ಪ್ರಧಾನಿ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ್ದಾರೆ. ಈ ಬಗ್ಗೆ ವಿವಿ ಆಡಳಿತ ಮಂಡಳಿಗೆ ದೂರು ನೀಡಿ, ಕಠಿಣ ಕ್ರಮಕ್ಕೆ ಆಗ್ರಹಿಸುವುದಾಗಿ ಎಬಿವಿಪಿ ಕಾರ್ಯದರ್ಶಿ ಪ್ರವೀಣ್ ಪಿಯೂಷ್ ತಿಳಿಸಿದ್ದಾರೆ.
ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರು ದೆಹಲಿ ದಂಗೆಗೆ ಸಂಚು, ಕ್ರೋಡೀಕರಣ ಮತ್ತು ಕಾರ್ಯತಂತ್ರದ ನಿರ್ದೇಶನಗಳನ್ನು ನೀಡುವಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು. ಯುಎಪಿಎ (UAPA) ಕಾಯ್ದೆಯಡಿ ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಸೋಮವಾರ ತೀರ್ಪು ನೀಡಿತ್ತು. ಆದರೆ, ಇದೇ ಪ್ರಕರಣದಲ್ಲಿ ಗುಲ್ಪೀಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್ ಸೇರಿದಂತೆ ಐವರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಇದನ್ನೂ ಓದಿ: ಮಧುರೈ ಬೆಟ್ಟದ ಮೇಲೆ ದೀಪ ಬೆಳಗಲು ಹೈಕೋರ್ಟ್ ಅನುಮತಿ | ತಮಿಳುನಾಡು ಸರ್ಕಾರಕ್ಕೆ ಮುಖಭಂಗ



















