ಪಲ್ಲೆಕೆಲೆ : ಐಸಿಸಿ ಟಿ20 ವಿಶ್ವಕಪ್ 2026ರ ನಿರ್ಣಾಯಕ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ ತಂಡ ಭರ್ಜರಿ ಜಯ ಸಾಧಿಸಿ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಲಂಕಾ ಮುಖ್ಯ ಕೋಚ್ ಸನತ್ ಜಯಸೂರ್ಯ, ತಂಡದ ಯಶಸ್ಸಿನ ಶ್ರೇಯಸ್ಸನ್ನು ಇಬ್ಬರು ಭಾರತೀಯ ಕೋಚ್‌ಗಳಿಗೆ ಸಲ್ಲಿಸಿದ್ದಾರೆ.
ಕಳೆದ ಎರಡು ಟಿ20 ವಿಶ್ವಕಪ್‌ಗಳಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದಿದ್ದ ಶ್ರೀಲಂಕಾ, ಈ ಬಾರಿ ತವರಿನಲ್ಲಿ ಆರ್ಭಟಿಸಿದೆ. 2021ರ ಚಾಂಪಿಯನ್ ಆಸ್ಟ್ರೇಲಿಯಾವನ್ನು 8 ವಿಕೆಟ್‌ಗಳಿಂದ ಮಣಿಸುವ ಮೂಲಕ ಟೂರ್ನಿಯಲ್ಲಿ ಮುನ್ನಡೆದಿದೆ. ಈ ಗೆಲುವಿನ ಹಿಂದೆ ಟೀಮ್ ಇಂಡಿಯಾದ ಮಾಜಿ ಕೋಚ್‌ಗಳಾದ ಆರ್. ಶ್ರೀಧರ್ ಮತ್ತು ವಿಕ್ರಮ್ ರಾಥೋರ್ ಅವರ ಪಾತ್ರ ದೊಡ್ಡದಿದೆ ಎಂದು ಜಯಸೂರ್ಯ ಬಣ್ಣಿಸಿದ್ದಾರೆ.
ಭಾರತೀಯ ಕೋಚ್‌ಗಳ ಬಗ್ಗೆ ಜಯಸೂರ್ಯ ಮೆಚ್ಚುಗೆ
ಪಂದ್ಯದ ನಂತರ ಮಾತನಾಡಿದ ಲಂಕಾ ದಿಗ್ಗಜ ಸನತ್ ಜಯಸೂರ್ಯ, “ಆರ್. ಶ್ರೀಧರ್ ನಮ್ಮ ಫೀಲ್ಡಿಂಗ್ ಕೋಚ್ ಆಗಿದ್ದರೆ, ವಿಕ್ರಮ್ ರಾಥೋರ್ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರೂ ಅತ್ಯುತ್ತಮ ವ್ಯಕ್ತಿಗಳು. ಅಭ್ಯಾಸದ ವೇಳೆ ನಾವು ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರಲು ಅವರು ನೆರವಾಗಿದ್ದಾರೆ. ಐಪಿಎಲ್‌ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಅವರು, ಆಟಗಾರರೊಂದಿಗೆ ಸುಲಭವಾಗಿ ಬೆರೆತು ಆತ್ಮವಿಶ್ವಾಸ ತುಂಬಿದ್ದಾರೆ,” ಎಂದು ಹೇಳಿದ್ದಾರೆ.
“ಕೆಲವೊಮ್ಮೆ ಕೋಚ್‌ಗಳಾಗಿ ಬ್ಯಾಟಿಂಗ್ ವೈಫಲ್ಯ ಕಂಡಾಗ ನಾವು ಹತಾಶರಾಗುತ್ತೇವೆ. ಆದರೆ ವಿಕ್ರಮ್ ಮತ್ತು ಶ್ರೀಧರ್ ಆಟಗಾರರಿಗೆ ಸದಾ ಬೆಂಬಲ ನೀಡುತ್ತಾ ಬಂದಿದ್ದಾರೆ,” ಎಂದು ಜಯಸೂರ್ಯ ಭಾರತೀಯ ಕೋಚ್‌ಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಪಥುಮ್ ನಿಸಾಂಕ ಅಬ್ಬರ ಮತ್ತು ಆ ಕ್ಯಾಚ್!
ಲಂಕಾ ಗೆಲುವಿನಲ್ಲಿ ಪಥುಮ್ ನಿಸಾಂಕ ಅವರ ಪಾತ್ರ ನಿರ್ಣಾಯಕವಾಗಿತ್ತು. ಟೂರ್ನಿಯ ಚೊತ ಶತಕ ಸಿಡಿಸಿದ ಅವರು ಆಸ್ಟ್ರೇಲಿಯಾ ಬೌಲರ್‌ಗಳನ್ನು ದಂಡಿಸಿದರು. ಅಷ್ಟೇ ಅಲ್ಲದೆ, ಗ್ಲೆನ್ ಮ್ಯಾಕ್ಸ್‌ವೆಲ್ ಹೊಡೆದ ಸ್ವಿಚ್ ಹಿಟ್ ಶಾಟ್‌ಗೆ ಪಾಯಿಂಟ್ ವಿಭಾಗದಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು.
ಬೌಲಿಂಗ್ ತಂತ್ರಗಾರಿಕೆ ಫಲಿಸಿತು
ಆರಂಭದ 8 ಓವರ್‌ಗಳಲ್ಲಿ ಆಸ್ಟ್ರೇಲಿಯಾ 100 ರನ್ ಸಿಡಿಸಿ ಅಬ್ಬರಿಸಿತ್ತು. ಜೊತೆಗೆ ಪ್ರಮುಖ ವೇಗಿ ಮತೀಶ ಪತಿರಾನ ಸ್ನಾಯು ಸೆಳೆತಕ್ಕೆ ಒಳಗಾಗಿ ಮೈದಾನ ತೊರೆದರು. ಆದರೂ ಎದೆಗುಂದದ ಲಂಕಾ ಬೌಲರ್‌ಗಳು ಸ್ಪಿನ್ ಅಸ್ತ್ರದ ಮೂಲಕ ಕಾಂಗರೂಗಳನ್ನು ಕಟ್ಟಿಹಾಕಿದರು. “ವೇಗವನ್ನು ತಗ್ಗಿಸಿ ಬೌಲ್ ಮಾಡುವಂತೆ ನಾವು ಸಂದೇಶ ರವಾನಿಸಿದೆವು. ಪಿಚ್ ಸ್ವಲ್ಪ ಗ್ರಿಪ್ ಆಗುತ್ತಿದ್ದರಿಂದ ಮಹೀಶ್ ತೀಕ್ಷಣ ಸೇರಿದಂತೆ ಸ್ಪಿನ್ನರ್‌ಗಳು ಅದ್ಭುತವಾಗಿದಾಳಿ ನಡೆಸಿ ಆಸ್ಟ್ರೇಲಿಯಾವನ್ನು 181 ರನ್‌ಗಳಿಗೆ ನಿಯಂತ್ರಿಸಿದರು,” ಎಂದು ಜಯಸೂರ್ಯ ವಿವರಿಸಿದ್ದಾರೆ.
ಗಾಯದ ಸಮಸ್ಯೆಯಿಂದ ವನಿಂದು ಹಸರಂಗ ಮತ್ತು ಪತಿರಾನ ಅವರಂತಹ ಪ್ರಮುಖ ಬೌಲರ್‌ಗಳ ಸೇವೆಯಿಂದ ವಂಚಿತವಾಗಿದ್ದರೂ, ಲಂಕಾ ಪಡೆ ತೋರಿದ ಹೋರಾಟದ ಮನೋಭಾವ ಈಗ ಸೂಪರ್-8 ಹಂತದಲ್ಲಿ ಇತರ ತಂಡಗಳಿಗೆ ಎಚ್ಚರಿಕೆ ರವಾನಿಸಿದೆ.
ಇದನ್ನೂ ಓದಿ ; ವಿಜಯ್-ರಶ್ಮಿಕಾ ಮದುವೆಯಲ್ಲಿ ಮೊಬೈಲ್ ಫೋನ್‌ಗೆ ನಿಷೇಧ!



















