ನವದೆಹಲಿ: ಭಾರತದ ಸಂಸತ್ ಇತಿಹಾಸದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಹೊಸ ದಾಖಲೆ ಬರೆದಿದ್ದಾರೆ. 2026ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುವ ಮೂಲಕ ಸತತ 9 ಬಾರಿ ಆಯವ್ಯಯ ಮಂಡಿಸಿದ ದೇಶದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಈ ಹಿಂದೆ ಸತತ ಎಂಟು ಬಾರಿ ಬಜೆಟ್ ಮಂಡಿಸಿದ್ದ ತಮ್ಮದೇ ದಾಖಲೆಯನ್ನು ಅವರು ಈ ಬಾರಿ ಮುರಿದಿದ್ದಾರೆ.

ಈ ಮೂಲಕ ಒಟ್ಟು ಬಜೆಟ್ ಮಂಡನೆಯಲ್ಲಿ ಪಿ. ಚಿದಂಬರಂ ಅವರ ದಾಖಲೆಯನ್ನು ಸರಿಗಟ್ಟಿರುವ ಸೀತಾರಾಮನ್, ಈಗ ಹತ್ತು ಬಜೆಟ್ ಮಂಡಿಸಿರುವ ಮೊರಾರ್ಜಿ ದೇಸಾಯಿ ಅವರ ನಂತರದ ಸ್ಥಾನದಲ್ಲಿದ್ದಾರೆ. ವಿಶೇಷವೆಂದರೆ, ಆಧುನಿಕ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾನುವಾರದಂದು ಬಜೆಟ್ ಮಂಡನೆಯಾಗಿರುವುದು ಗಮನಾರ್ಹವಾಗಿದೆ.
ಇದೇ ವೇಳೆ ಸೀತಾರಾಮನ್ ಅವರು ಈ ಬಾರಿ ಒಟ್ಟು 1 ಗಂಟೆ 25 ನಿಮಿಷಗಳ ಕಾಲ (85 ನಿಮಿಷ) ಬಜೆಟ್ ಭಾಷಣ ಮಾಡಿದ್ದಾರೆ. ಇದು ಅವರ ಒಂಬತ್ತು ಬಜೆಟ್ ಭಾಷಣಗಳ ಪೈಕಿ ಆರನೇ ಸುದೀರ್ಘ ಭಾಷಣವಾಗಿ ದಾಖಲಾಗಿದೆ. ಈ ಅವಧಿಯು 2024ರ ಜುಲೈನಲ್ಲಿ ಅವರು ಮಂಡಿಸಿದ್ದ ಪೂರ್ಣ ಪ್ರಮಾಣದ ಬಜೆಟ್ ಭಾಷಣದ ಅವಧಿಗೆ ಸಮ. ನಿರ್ಮಲಾ ಸೀತಾರಾಮನ್ ಅವರ ವೃತ್ತಿಜೀವನದಲ್ಲೇ 2020ರ ಬಜೆಟ್ ಭಾಷಣವು ಅತಿ ಹೆಚ್ಚು ಅಂದರೆ 162 ನಿಮಿಷಗಳ ಕಾಲ ನಡೆದಿತ್ತು. ಅಲ್ಲಿಂದೀಚೆಗೆ ಅವರ ಭಾಷಣದ ಅವಧಿಯಲ್ಲಿ ಏರಿಳಿತಗಳಾಗುತ್ತಾ ಬಂದಿದ್ದು, ಕಳೆದ ವರ್ಷದ 77 ನಿಮಿಷಗಳಿಗೆ ಹೋಲಿಸಿದರೆ ಈ ಬಾರಿ ಭಾಷಣದ ಸುದೀರ್ಘತೆ ಕೊಂಚ ಹೆಚ್ಚಾಗಿದೆ.
ಇದನ್ನೂ ಓದಿ : ದೇಶದ ವಿವಿಧೆಡೆ ಮೂರು ಆಯುರ್ವೇದ ಏಮ್ಸ್ ಆಸ್ಪತ್ರೆ | ನಿರ್ಮಲಾ ಸೀತಾರಾಮನ್ ಘೋಷಣೆ



















