ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಬೌಲರ್ ಮೊಹಮ್ಮದ್ ಸಿರಾಜ್ ಹಾಗೂ ಟ್ರಾವಿಸ್ ಹೆಡ್ ಮೈದಾನದಲ್ಲೇ ಪರಸ್ಪರ ಕಿತ್ತಾಡಿಕೊಂಡಿದ್ದರು. ಸದ್ಯ ಈ ಘಟನೆಗೆ ಸಂಬಂದಿಸಿದಂತೆ ಐಸಿಸಿ ದಂಡ ವಿಧಿಸಿದೆ.
ಆದರೆ, ಐಸಿಸಿ ವಿಧಿಸಿರುವ ಈ ಶಿಕ್ಷೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂದು ಭಾರತೀಯ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮೊಹಮ್ಮದ್ ಸಿರಾಜ್ ಗೆ ದಂಡದ ಜೊತೆಗೆ ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ. ಆದರೆ, ಹೆಡ್‌ಗೆ ಕೇವಲ ಡಿಮೆರಿಟ್ ಅಂಕಗಳನ್ನು ಮಾತ್ರ ಶಿಕ್ಷೆಯಾಗಿ ವಿಧಿಸಲಾಗಿದೆ. ಇದು ಈಗ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಆಸ್ಟ್ರೇಲಿಯಾ ತಂಡದ ಪರ ಟ್ರಾವಿಸ್ ಹೆಡ್ ಸ್ಫೋಟಕ ಶತಕ ಗಳಿಸಿದ್ದರು. ಸಿರಾಜ್ ಎಸೆದ ಓವರ್ ನಲ್ಲಿ ಹೆಡ್ ಒಂದು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿದ್ದರು. ನಂತರ ಅದೇ ಓವರ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಭಾರತಕ್ಕೆ ತಲೆನೋವಾಗಿದ್ದ ಹೆಡ್ ಔಟ್ ಆಗುತ್ತಿದ್ದಂತೆ ಸಿರಾಜ್ ಜೋರಾಗಿ ಕೂಗಾಡುತ್ತ ಸಿಟ್ಟಿನಿಂದ ಸಂಭ್ರಮಿಸತೊಡಗಿದರು. ಆಗ ಹೆಡ್ ಸಿರಾಜ್ ಗೆ ಏನೋ ಹೇಳಿದರು.
ಇದರಿಂದ ಕೆರಳಿದ ಸಿರಾಜ್, ಪೆವಿಲಿಯನ್ ಗೆ ಹೋಗುವಂತೆ ಹೆಡ್ ಗೆ ಕೈ ಸನ್ನೆ ಮಾಡಿದರು. ಆಗ ಹೆಡ್ ಮತ್ತೆ ಏನೋ ಹೇಳಿದರು. ಪಂದ್ಯ ಮುಗಿದ ಆನಂತರವೂ ಇಬ್ಬರ ಮಧ್ಯೆ ಆರೋಪ – ಪ್ರತ್ಯಾರೋಪ ನಡೆಯಿತು.
ಈಗ ಐಸಿಸಿ ಇಬ್ಬರೂ ಆಟಗಾರರಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಮ್ಯಾಚ್ ರೆಫರಿ ರಂಜನ್ ಮದುಗಲೆ ಅವರು ನೀತಿ ಸಂಹಿತೆಯ ವಿಭಿನ್ನ ಕಲಂಗಳ ಅಡಿಯಲ್ಲಿ ಇಬ್ಬರೂ ಆಟಗಾರರನ್ನು ತಪ್ಪಿತಸ್ಥರೆಂದು ಘೋಷಿಸಿದ್ದಾರೆ. ಔಟಾದ ಬ್ಯಾಟ್ಸ್‌ಮನ್‌ಗೆ ಪ್ರಚೋದನೆ ನೀಡುವಂತಹ ಭಾಷೆ, ಸನ್ನೆ ಅಥವಾ ಕ್ರಿಯೆಯ ಬಳಕೆಗೆ ಸಂಬಂಧಿಸಿದ 2.5 ನೇ ವಿಧಿಯನ್ನು ಉಲ್ಲಂಘಿಸಿದ್ದಕ್ಕಾಗಿ ಸಿರಾಜ್ ತಪ್ಪಿತಸ್ಥರೆಂದು ಕಂಡುಬಂದಿದೆ. ಇದರ ಅಡಿಯಲ್ಲಿ ಸಿರಾಜ್ ಅವರ ಪಂದ್ಯ ಶುಲ್ಕದ ಶೇ. 20ರಷ್ಟು ಕಡಿತಗೊಳಿಸಲಾಗಿದೆ. ಅಲ್ಲದೇ, ಒಂದು ಡಿಮೆರಿಟ್ ಪಾಯಿಂಟ್ ಕೂಡ ಪಡೆದಿದ್ದಾರೆ ಎಂದು ಶಿಕ್ಷೆ ಘೋಷಿಸಲಾಗಿದೆ.
ಆದರೆ, ಹೆಡ್ ಅವರ ಪಂದ್ಯದ ಶುಲ್ಕವನ್ನು ಕಡಿತಗೊಳಿಸಲಾಗಿಲ್ಲ. ಶಿಕ್ಷೆಯಾಗಿ, ಹೆಡ್ಗೆ ಕೇವಲ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಇದು ಕೂಡ ಈಗ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.