ಗದಗ : ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ಅಣ್ಣನೇ ಒಡಹುಟ್ಟಿದ ತಮ್ಮನನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ ದಾರುಣ ಘಟನೆ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಫಕ್ಕಿರಪ್ಪ (19) ಎಂದು ಗುರುತಿಸಲಾಗಿದ್ದು, ಆರೋಪಿ ಅಶೋಕನನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಕ್ಕಮೂಲಂಗಿ ಗ್ರಾಮದ ನಿವಾಸಿಗಳಾಗಿದ್ದು, ಕುರಿ ಮೇಯಿಸಲು ಹಿರೇಕೊಪ್ಪ ಗ್ರಾಮಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.
ಹುಡುಗಿ ವಿಚಾರಕ್ಕೆ ಸಂಬಂಧಿಸಿದ ವೈಮನಸ್ಸಿನಿಂದ ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕುರಿಗಳ ದಡ್ಡಿಯಲ್ಲಿ ಮಲಗಿದ್ದ ತಮ್ಮ ಫಕ್ಕಿರಪ್ಪನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಅಶೋಕ ಭೀಕರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆ ಬಳಿಕ ತಾನೇ ಕೊಲೆ ಮಾಡಿ, ಬೇರೆಯವರು ಮಾಡಿದ್ದಾರೆಂದು ತಪ್ಪಿಸಿಕೊಳ್ಳಲು ಆರೋಪಿ ನಾಟಕವಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಪೊಲೀಸರ ತೀವ್ರ ತನಿಖೆಯ ವೇಳೆ ಸತ್ಯ ಹೊರಬಿದ್ದಿದ್ದು, ಅಶೋಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದಿದೆ. ಘಟನಾ ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದಾವಣಗೆರೆಯಲ್ಲಿ ನಿರ್ಮಾಣವಾದ 15 ದಿನಕ್ಕೆ ಕಿತ್ತು ಹೋಯ್ತು ಚರಂಡಿ : ಸ್ಥಳೀಯರ ಆಕ್ರೋಶ



















