ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನ ಹೈ ಜಂಪ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದು ಬಂದಿದೆ.
ಪುರುಷರ ಹೈ ಜಂಪ್ ಟಿ47 ಸ್ಪರ್ಧೆಯಲ್ಲಿ ಭಾರತದ ನಿಶಾದ್ ಕುಮಾರ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. 24 ವರ್ಷದ ನಿಶಾದ್ ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಕೂಡ ಇದೇ ಕೂಟದಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದರು. ಈಗ ಮತ್ತೊಮ್ಮೆ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದಾರೆ. ಇಡೀ ಭಾರತ ಅವರ ಸಾಧನೆಗೆ ಅಭಿನಂದಿಸುತ್ತಿದೆ.
11 ಜನರಿದ್ದ ಫೈನಲ್ ಸ್ಪರ್ಧೆಯಲ್ಲಿ ನಿಶಾದ್ ಆರಂಭದಲ್ಲೇ ಉತ್ತಮ ಪ್ರದರ್ಶನ ನೀಡಿದ್ದರು. ಆದರೂ ಟಾಪ್ 3ರಲ್ಲಿ ಸ್ಥಾನ ಪಡೆಯಲು ಸಾಕಷ್ಟು ಕಷ್ಟ ಟ್ಟರು. ಕೊನೆಗೂ ನಿಶಾದ್ 2.04 ಮೀಟರ್ ಜಿಗಿಯುವದರ ಮೂಲಕ ಸೀಸನ್ ನ ಅತ್ಯುತ್ತಮ ಜಂಪ್ ಮಾಡುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಬೆಳ್ಳಿ ಪದಕಕ್ಕೆ ಕೊರೊಳೊಡ್ಡಿದ್ದಾರೆ.
ಯುಎಸ್ ಎದ ಟೌನ್ಸೆಂಡ್ 2.12 ಮೀ ಜಿಗಿಯುವುದರೊಂದಿಗೆ ಚಿನ್ನದ ಪದಕ ಗೆದ್ದರೆ, ತಟಸ್ಥ ಪ್ಯಾರಾಲಿಂಪಿಕ್ ಅಥ್ಲೀಟ್ ಗಳನ್ನು ಪ್ರತಿನಿಧಿಸಿದ್ದ ಜಾರ್ಜಿ ಮಾರ್ಗೀವ್ ಕಂಚಿನ ಪದಕ ಗೆದ್ದಿದ್ದಾರೆ. ಬೆಳ್ಳಿಯ ಮೂಲಕ ಭಾರತದ ಪದಕಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಇಲ್ಲಿಯವರೆಗೆ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಭಾರತೀಯ ಆಟಗಾರರು ಗೆದ್ದಿದ್ದಾರೆ. ಅಲ್ಲದೇ, ನಿನ್ನೆಯೇ ನಡೆದಿದ್ದ 200 ಮೀ ಟಿ35 ಓಟದಲ್ಲಿ ಭಾರತೀಯ ಆಟಗಾರ್ತಿ ಪ್ರೀತಿ ಪಾಲ್ ಕಂಚು ಗೆದ್ದಿದ್ದಾರೆ. ಈ ಮೂಲಕ ಒಂದೇ ಕೂಟದಲ್ಲಿ ಪ್ರೀತಿ ಪಾಲ್ ಎರಡು ಕಂಚು ಗೆದ್ದ ಸಾಧನೆ ಮಾಡಿದ್ದಾರೆ.