ಥೈಲ್ಯಾಂಡ್/ಕಾಂಬೋಡಿಯಾ : ವಾರಗಳ ಕಾಲ ನಡೆದ ಗಡಿ ಹೋರಾಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಮಾರಕ ಸಂಘರ್ಷವನ್ನು ತಕ್ಷಣವೇ ನಿಲ್ಲಿಸಲು, ಎರಡೂ ರಾಷ್ಟ್ರಗಳು ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಂಡಿವೆ. ಗಡಿ ಪ್ರದೇಶದಲ್ಲಿ ಗುಂಡಿನ ಸದ್ದು ಮೌನವಾಗುವಂತೆ ಮಾಡಿದ ಈ ನಿರ್ಧಾರ ತೆಗೆದುಕೊಂಡಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮದ ಬಳಿಕವೂ ಕೆಲವೇ ದಿನಗಳಲ್ಲಿ ಮತ್ತೆ ಥೈಲ್ಯಾಂಡ್ -ಕಾಂಬೋಡಿಯಾ ದೇಶಗಳು ಒಬ್ಬರ ಮೇಲೊಬ್ಬರು ನಾ ಮುಂದು ತಾ ಮುಂದು ಎಂಬತೆ ಯುದ್ಧ ಆರಂಭಿಸಿದರು. ಇದರಲ್ಲಿ ಹತ್ತಾರು ಜನರ ಜೀವ ಕಳೆದುಕೊಂಡರು.. ಗಡಿಯಲ್ಲಿನ ಲಕ್ಷಾಂತರ ಜನರ ಸ್ಥಳಾಂತರಕ್ಕೆ ಕಾರಣವಾದ ನಂತರ ಈಗ ಮತ್ತೆ ನಾವು ಶಾಂತಿ ಪ್ರಿಯರು ಎನ್ನುತ್ತಾ ʼತಕ್ಷಣದ ಕದನ ವಿರಾಮʼಕ್ಕೆ ಒಪ್ಪಿಕೊಂಡು, ಸಹಿ ಹಾಕಿದ್ದಾರೆ
ಒಪ್ಪಂದದ ಪ್ರಮುಖ ಅಂಶವಾಗಿ ತಕ್ಷಣದ ಕದನ ವಿರಾಮ ಜಾರಿಯಾಗಿದೆ. ಇನ್ನು ಮುಂದೆ ಗಡಿ ಪ್ರದೇಶದಲ್ಲಿ ಯಾವುದೇ ರೀತಿಯ ಗುಂಡಿನ ದಾಳಿ, ಶೆಲ್ ದಾಳಿ ಅಥವಾ ವಾಯು ದಾಳಿ ನಡೆಯುವುದಿಲ್ಲ. ಎರಡೂ ದೇಶಗಳು ಭಾರೀ ಶಸ್ತ್ರಾಸ್ತ್ರಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಒಪ್ಪಿಕೊಂಡಿವೆ. ಸೈನಿಕ ಚಟುವಟಿಕೆಗಳನ್ನು ಹಿಂಪಡೆದು, ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸದಂತೆ ಭರವಸೆ ನೀಡಲಾಗಿದೆ.
ಈ ಜಂಟಿ ಹೇಳಿಕೆಗೆ ಸಹಿ ಹಾಕಿದ ನಂತರ ಎರಡೂ ಕಡೆಯವರು ತಕ್ಷಣದ ಕದನ ವಿರಾಮಕ್ಕೆ ಒಪ್ಪುತ್ತಾರೆ” ಎಂದು ಥಾಯ್ ಮತ್ತು ಕಾಂಬೋಡಿಯನ್ ರಕ್ಷಣಾ ಸಚಿವರು ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯಾವ್ಯಾವ ಒಪ್ಪಂದಕ್ಕೆ ಸಹಿ?
- ಗಡಿ ಪ್ರದೇಶದಲ್ಲಿ ತಕ್ಷಣದ ಕದನ ವಿರಾಮ ಜಾರಿ
- ಎಲ್ಲ ರೀತಿಯ ಗುಂಡಿನ ದಾಳಿ ಮತ್ತು ಶೆಲ್ ದಾಳಿ ಸಂಪೂರ್ಣ ನಿಲುಗಡೆ
- ಭಾರೀ ಶಸ್ತ್ರಾಸ್ತ್ರಗಳ ಬಳಕೆ ಸ್ಥಗಿತ ಮಾಡುವ ಒಪ್ಪಂದ
- ಹೊಸ ಸೈನಿಕ ನಿಯೋಜನೆ ಮತ್ತು ಚಲನವಲನಕ್ಕೆ ತಡೆ
- ವಾಯು ಪ್ರದೇಶ ಉಲ್ಲಂಘನೆ ಇಲ್ಲ – ಡ್ರೋನ್ ಮತ್ತು ಯುದ್ಧವಿಮಾನಗಳ ಬಳಕೆ ನಿಷೇಧ
- ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿಸುವ ಯಾವುದೇ ಕ್ರಮ ಕೈಗೊಳ್ಳಬಾರದು ಎಂಬ ನಿರ್ಧಾರ
- ಕದನ ವಿರಾಮ ಪಾಲನೆಗೆ ಸಂಯುಕ್ತ ಮೇಲ್ವಿಚಾರಣಾ ವ್ಯವಸ್ಥೆ
- ASEAN ಮಧ್ಯಸ್ಥಿಕೆಯಲ್ಲಿ ಶಾಂತಿ ಪ್ರಕ್ರಿಯೆ ಮುಂದುವರಿಕೆ. 2 ಕಡೆಯವರು ಮುಂದಿನ ಚಲನೆಯಿಲ್ಲದೆ ಪ್ರಸ್ತುತ ಪಡೆಗಳ ನಿಯೋಜನೆಯನ್ನು ನಿರ್ವಹಿಸಲು ಒಪ್ಪುತ್ತೇವೆ ಎಂದು ಇಬ್ಬರು ಸಚಿವರು ಹೇಳಿ, ಸಹಿ ಹಾಕಿದ್ದಾರೆ.
ಈ ಕದನ ವಿರಾಮದಿಂದ ಗಡಿ ಪ್ರದೇಶದ ಜನರಲ್ಲಿ ನಿರಾಳತೆಯ ವಾತಾವರಣ ಮೂಡಿದೆ. ಸ್ಥಳಾಂತರಗೊಂಡ ನಾಗರಿಕರು ತಮ್ಮ ಮನೆಗಳಿಗೆ ಮರಳಲು ಅವಕಾಶ ಸಿಗಲಿದೆ. ಮಾನವೀಯ ನೆರವು, ಆಹಾರ ಮತ್ತು ವೈದ್ಯಕೀಯ ಸಹಾಯವನ್ನು ನಿರ್ಬಂಧವಿಲ್ಲದೆ ಒದಗಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಶಾಂತಿ ಸ್ಥಾಪನೆಯ ಮೊದಲ ಹೆಜ್ಜೆಯಾಗಿ ಇದನ್ನು ಪರಿಗಣಿಸಲಾಗುತ್ತಿದೆ.
ಯುದ್ದಕ್ಕೆ ಕಾರಣವೇನು?
11 ನೇ ಶತಮಾನದ ಪ್ರಿಯಾ ವಿಹಾರ್ ದೇವಾಲಯವು ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಯುದ್ಧಕ್ಕೆ ಕಾರಣವಾಗಿದೆ. ಈ ದೇವಾಲಯವು ಕಾಂಬೋಡಿಯಾದ ಪ್ರಿಯಾ ವಿಹಾರ್ ಪ್ರಾಂತ್ಯ ಮತ್ತು ಥೈಲ್ಯಾಂಡ್‌ನ ಸಿಸಾಕೆಟ್ ಪ್ರಾಂತ್ಯದ ಗಡಿಯಲ್ಲಿದೆ. 1962ರಲ್ಲಿ, ಅಂತರರಾಷ್ಟ್ರೀಯ ನ್ಯಾಯಾಲಯ ಈ ದೇವಾಲಯವು ಕಾಂಬೋಡಿಯಾಕ್ಕೆ ಸೇರಿದೆ ಎಂದು ತೀರ್ಪು ನೀಡಿತ್ತು. ಈ ಭೂಮಿ ತನಗೆ ಸೇರಿದೆ ಎಂದು ಥೈಲ್ಯಾಂಡ್ ಹೇಳಿತ್ತು ಹೀಗೆ ಆರಂಭವಾದ ಯುದ್ಧದ ಮಧ್ಯೆ ಥೈಲ್ಯಾಂಡ್ ಆಂಜನೇಯನ ಮೂರ್ತಿಯನ್ನು ನೆಲಸಮಗೊಳಿಸಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರೀ ವೈರಲ್ ಆಗಿತ್ತು.
ಜುಲೈನಲ್ಲಿ ನಡೆದ ಗಡಿ ಸಂಘರ್ಷಕ್ಕೆ ಟ್ರಂಪ್ ಮದ್ಯಸ್ಥಿಕೆವಹಿಸಿ ಸುಂಕ ಬೆದರಿಕೆಗಳನ್ನು ಹಾಕುವ ಮೂಲಕ ಕದನ ವಿರಾಮ ಘೋಷಿಸಿದ್ದರ… ಆದರೆ, ಕೆಲವೇ ದಿನಗಳಲ್ಲಿ ನಮ್ಮ ಸಾರ್ವಭೌಮತ್ವವೇ ನಮಗೆ ಮುಖ್ಯ ಎಂಬಂತೆ ಮತ್ತೆ ಯುದ್ಧ ಗರಿಗೆದರಿತ್ತು.. ಸದ್ಯ ಡಿ. 8ರಿಂದ ಸತತ 20ದಿನಗಳ ಕಾಲ ನಡೆದ ಯುದ್ದಕ್ಕೆ ಈ ವರ್ಷದಲ್ಲಿ 2ನೇ ಬಾರಿಗೆ ಕದನ ವಿರಾಮ ಘೋಷಿಸುವ ಮೂಲಕ ತೆರೆಬಿದ್ದಿದೆ.
ಒಟ್ಟಾರೆ, ಗುಂಡಿನ ಭಾಷೆಯನ್ನು ಬಿಟ್ಟು ಮಾತುಕತೆಯ ದಾರಿಗೆ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಕಾಲಿಟ್ಟಿವೆ. ಈ ಕದನ ವಿರಾಮ ತಾತ್ಕಾಲಿಕ ತೀರ್ಮಾನವಾಗದೆ, ಶಾಶ್ವತ ಶಾಂತಿಗೆ ದಾರಿ ಮಾಡಿಕೊಡುತ್ತದೆಯೇ ಎಂಬುದು ಈಗ ಪ್ರಮುಖ ಪ್ರಶ್ನೆ. ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡುವ ಹೊಣೆಗಾರಿಕೆ ಉಭಯ ರಾಷ್ಟ್ರಗಳ ಮೇಲೆಯೇ ಇದೆ.
ಇದನ್ನೂ ಓದಿ : ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನದಿಂದ ವಾಯುುಪಡೆ ಘಟಕ ಘೋಷಣೆ : ಕಾಶ್ಮೀರವನ್ನು ಹೊಸ ಪ್ರಾಂತ್ಯವೆಂದು ಘೋಷಿಸಲು ನಿರ್ಧಾರ



















