ಬೆಳಗಾವಿ: ನವೆಂಬರ್-ಡಿಸೆಂಬರ್ ಒಳಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವುದು ನೂರಕ್ಕೆ ನೂರರಷ್ಟು ನಿಜ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಅಶೋಕ್, ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುತ್ತಿಲ್ಲ, ಡಿಕೆಶಿ ಹಠ ಬಿಡುತ್ತಿಲ್ಲ. ಅಧಿಕಾರ ಹಂಚಿಕೆ ವಿಷಯದಲ್ಲಿ ಒಪ್ಪಂದ ಆಗಿರುವುದು ಸತ್ಯ. ಅಂತೆಯೇ ಜಗಳ ಮತ್ತೇ ಆರಂಭವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಜಗಳದ ಮಧ್ಯೆ ಸರ್ಕಾರ ಪತನವಾದರೆ ನಾವೇನೂ ಸರ್ಕಾರ ಮಾಡುವುದಿಲ್ಲ. ನಾವು ಚುನಾವಣೆಗೆ ಹೋಗಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕರೇ ಅನುದಾನ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಹಳ್ಳ ಇಲ್ಲದೇ ರಸ್ತೆ ತೋರಿಸಿದ್ದರೆ ಬಹುಮಾನ ಕೊಡಬಹುದು ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಮಳೆ ,ಬೆಳೆ ಹಾನಿ ವೀಕ್ಷಣೆಗೆ ಬಂದ ಬಿಜೆಪಿ ನಿಯೋಗ ಅತಿ ಮಳೆಯಿಂದ ಹಾಳಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಬೆಳಗಾವಿಯಲ್ಲಿ ಬಿಜೆಪಿ ನಾಯಕರಿಂದ ಅತಿವೃಷ್ಟಿ ಪ್ರದೇಶ ವೀಕ್ಷಣೆ ಮಾಡಲಾಯಿತು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಎಂ ಎಲ್ ಸಿಗಳಾದ ಸಿಟಿ ರವಿ, ಎನ್ ರವಿಕುಮಾರ್, ಸಂಸದ ರಮೇಶ್ ಜಿಗಜಿಣಗಿ ನೇತೃತ್ವದ ತಂಡದಿಂದ ಪರಿಶೀಲನೆ ಮಾಡಲಾಯಿತು.
ಈರಣ್ಣಗೌಡ ಮೀಸಿಪಾಟೀಲ್ ಎಂಬವರ ಜಮೀನಿಗೆ ಆಗಮಿಸಿದ ನಿಯೋಗ ಗದ್ದೆಯಲ್ಲಿ ಹಾಳಾದ ಗಜ್ಜರಿ ಬೆಳೆ ಹಾನಿ ಕುರಿತು ರೈತರಿಂದ ಮಾಹಿತಿಯನ್ನು ಪಡೆಯಿತು. ಇದೇ ಮೊದಲ ಬಾರಿಗೆ ರಾಜ್ಯ ಬಿಜೆಪಿ ನಾಯಕರಿಗೆ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಸಾಥ್ ನೀಡಿದರು.ಆದರೆ ಆದರೆ ಏನನ್ನು ಅವಲೋಕಿಸದೆ ರಮೇಶ್ ಜಾರಕಿಹೊಳಿ ತೆರಳಿದರು.