ಮೈಸೂರು: ಇಲ್ಲಿನ ಉದಯಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರನ್ನು ಬಂಧಿಸಲಾಗಿದೆ. ಹೀಗಾಗಿ ಬಂಧಿತರ ಪೋಷಕರು ನಮ್ಮ ಮಕ್ಕಳು ತಪ್ಪು ಮಾಡಿಲ್ಲ. ಅವರನ್ನು ಕಾಪಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತಿದ್ದಾರೆ. ಸ್ಟೇಷನ್ ಎದುರು ನಿಂತು ಗೋಳಾಡುತ್ತಿದ್ದಾರೆ.
ಕಲ್ಯಾಣಗಿರಿ ಯುವಕನೊಬ್ಬ ಸಾಮಾಜಿಕ ಮಾಧ್ಯಮದಲ್ಲಿ (Social Media) ಮುಸ್ಲಿಂ ಧರ್ಮ ಗುರುಗಳ ಬಗ್ಗೆ ಅವಹೇಳಕಾರಿಯಾಗಿ ಮಾಡಿದ್ದ ಪೋಸ್ಟ್ ಹಿಂಸಾಚಾರಕ್ಕೆ (Violence) ಕಾರಣವಾಗಿತ್ತು. ಪೋಸ್ಟ್ ಮಾಡಿದ ಯುವಕನನ್ನು ಬಂಧಿಸುವಂತೆ ಉದಯಗಿರಿ (Udayagiri) ಪೊಲೀಸ್ ಠಾಣೆ ಎದುರು ಮುಸ್ಲಿಂ ಯುವಕರು ಜಮಾಯಿಸಿ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಸ್ವಲ್ಪ ಯಾಮಾರಿದರೂ ನಮ್ಮ ಹೆಣವೇ ಬೀಳುತ್ತಿತ್ತು ಎಂದು ಕೂಡ ಪೊಲೀಸರು ಎಫ್ ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪೊಲೀಸರು 13 ಜನರನ್ನು ಬಂಧಿಸಿದ್ದಾರೆ.
13 ಜನರನ್ನು ಬಂಧಿಸಿದ ನಂತರ ಉದಯಗಿರಿ ಪೊಲೀಸ್ ಠಾಣೆ ಮುಂದೆ ಮುಸ್ಲಿಂ ಮಹಿಳೆಯರು ಜಮಾವಣೆಗೊಂಡು ಹೈಡ್ರಾಮಾ ನಡೆಸಿದ್ದಾರೆ. ತಡರಾತ್ರಿ ಪೊಲೀಸ್ ಠಾಣೆ ಮುಂದೆ ಬಂಧಿತರ ಪೋಷಕರು, ನಮ್ಮ ಮಕ್ಕಳನ್ನು ಬಿಡುಗಡೆ ಮಾಡಿ. ಅವರು ಏನೂ ತಪ್ಪು ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ ಸಹಾಯ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.