ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್, ಇಂಗ್ಲೆಂಡ್ ವಿರುದ್ದ ಮೂರನೇ ಏಕದಿನ ಪಂದ್ಯದಲ್ಲಿ ಶತಕವನ್ನು ಬಾರಿಸಿದ್ದಾರೆ. 95 ಎಸೆತಗಳಲ್ಲಿ ಶುಭಮನ್ ಗಿಲ್ ಮೂರಂಕಿ ವೈಯಕ್ತಿಕ ಮೊತ್ತ ದಾಖಲಿಸಿದ್ದಾರೆ. ಇದು ಗಿಲ್ ಅವರ ಏಕದಿನ ಕ್ರಿಕೆಟ್ 7ನೇ ಶತಕ. ಈ ಶತಕದ ಮೂಲಕ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 2500 ರನ್‌ಗಳನ್ನು ಪೂರ್ಣಗೊಳಿಸಿ ವಿಶೇಷ ದಾಖಲೆ ಬರೆದಿದ್ದಾರೆ.
ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡದ ಪರ ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಿದ್ದರು. ಅವರು 95 ಎಸೆತಗಳಲ್ಲಿ ತಮ್ಮ ಒಡಿಐ ವೃತ್ತಿ ಜೀವನದ ಏಳನೇ ಶತಕ ಪೂರ್ಣಗೊಳಿಸಿದರು. ಅಂದ ಹಾಗೆ ಒಟ್ಟು 102 ಎಸೆತಗಳನ್ನು ಎದುರಿಸಿದ ಗಿಲ್, ಮೂರು ಸಿಕ್ಸರ್ ಹಾಗೂ 14 ಬೌಂಡರಿಗಳೊಂದಿಗೆ 112 ರನ್ ಬಾರಿಸಿದರು. ಆದರೆ, ಉತ್ತಮ ಬ್ಯಾಟ್ ಮಾಡುತ್ತಿದ್ದ ಗಿಲ್, ಆದಿಲ್ ರಶೀದ್ ಎಸೆತ ಅರಿಯುವಲ್ಲಿ ವಿಫಲರಾಗಿ ಕ್ಲೀನ್ ಬೌಲ್ಡ್ ಆದರು.
ವಿರಾಟ್ ಕೊಹ್ಲಿ ಜೊತೆಗೆ ಮುರಿಯದ ಎರಡನೇ ವಿಕೆಟ್‌ಗೆ 116 ರನ್‌ಗಳನ್ನು ಗಳಿಸಿದ್ದ ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಜೊತೆ ಮೂರನೇ ವಿಕೆಟ್‌ಗೆ 104 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಭಾರತ ತಂಡದ ಮೊತ್ತ 220ರ ಗಡಿ ದಾಟಿಸುವಲ್ಲಿ ಮಹತ್ತರ ಪಾತ್ರವಹಿಸಿದರು.
ಅತಿವೇಗದ 2500 ರನ್‌ಗಳು
ತಮ್ಮ ವೃತ್ತಿ ಜೀವನದ ಏಳನೇ ಒಡಿಐ ಶತಕದ ಮೂಲಕ ಶುಭಮನ್ ಗಿಲ್, ಏಕದಿನ ಕ್ರಿಕೆಟ್‌ನಲ್ಲಿ 2500 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 2500 ರನ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಗಿಲ್ ಬರೆದಿದ್ದಾರೆ. ಆ ಮೂಲಕ ದಕ್ಷಿಣ ಆಫ್ರಿಕಾ ಮಾಜಿ ಬ್ಯಾಟ್ಸ್‌ಮನ್ ಹಾಶಿಮ್ ಆಮ್ಲಾ ದಾಖಲೆಯನ್ನು ಮುರಿದಿದ್ದಾರೆ. ಆಮ್ಲಾ ತಮ್ಮ 51 ಏಕದಿನ ಪಂದ್ಯದಲ್ಲಿ 2500 ರನ್‌ಗಳನ್ನು ಪೂರ್ಣಗೊಳಿಸಿದ್ದರು. ಆದರೆ, ಭಾರತೀಯ ಬ್ಯಾಟ್ಸ್‌ಮನ್ 50 ಪಂದ್ಯಗಳಿಂದ ಈ ಮೊತ್ತವನ್ನು ಪೂರ್ಣಗೊಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 131 ಇನಿಂಗ್ಸ್‌ಗಳಿಂದ ಗಿಲ್ 5000 ರನ್‌ಗಳನ್ನು ಕೂಡ ಪೂರ್ಣಗೊಳಿಸಿದ್ದಾರೆ.
ಎರಡನೇ ಸ್ಥಾನಕ್ಕೆ ಗಿಲ್
ಶುಭಮನ್ ಗಿಲ್ ಐಸಿಸಿ ಏಕದಿನ ಕ್ರಿಕೆಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಆ ಮೂಲಕ ತಮ್ಮ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.