ಸರ್ವತೋಮುಖ ಪ್ರದರ್ಶನ ನೀಡಿದ ಭಾರತ ತಂಡ, ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿತು. ಟಿ20ಐ ಸರಣಿ ಸೋಲಿಗೆ ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದ್ದ ಇಂಗ್ಲೆಂಡ್ ಪಡೆ ಏಕದಿನ ಸಿರೀಸ್ನಲ್ಲೂ ಆಘಾತ ಅನುಭವಿಸಿದೆ. 2023ರ ವಿಶ್ವಕಪ್ ನಂತರ ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿದ 8 ಏಕದಿನ ಪಂದ್ಯಗಳಲ್ಲಿ 7ರಲ್ಲಿ ಸೋತಿರುವುದು ಈ ಫಲಿತಾಂಶದ ವಿಶೇಷ .
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ, ಹರ್ಷಿತ್ ರಾಣಾ ತಲಾ ಮೂರು ವಿಕೆಟ್ ಉರುಳಿಸಿ ಪ್ರವಾಸಿ ತಂಡವನ್ನು 47.4 ಓವರ್ಗಳಲ್ಲಿ 248 ರನ್ಗಳಿಗೆ ಆಲ್‌ಔಟ್ ಮಾಡಿದರು. ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಶ್ರೇಯಸ್ ಅಯ್ಯರ್ (59), ಶುಭ್ಮನ್ ಗಿಲ್ (87) ಮತ್ತು ಅಕ್ಷರ್ ಪಟೇಲ್ (52) ಬ್ಯಾಟಿಂಗ್ ಬಲದಿಂದ 38.4 ಓವರ್ಗಳಿಗೆ 6 ವಿಕೆಟ್ ಕಳೆದುಕೊಂಡು 251 ರನ್ ಗಳಿಸಿತು.
ಭಾರತೀಯ ಬ್ಯಾಟರ್ಗಳ ಬೊಂಬಾಟ್ ಆಟ
249 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಏಕದಿನ ಕ್ರಿಕೆಟ್ಗೂ ಪದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್ ಭರ್ಜರಿ ಮೂರು ಬೌಂಡರಿಗಳ ಮೂಲಕ ಭರವಸೆ ಮೂಡಿಸಿದರೂ 19 ರನ್ಗೆ ಔಟಾಗಿ ನಿರಾಸೆಗೊಂಡರು. ಮತ್ತೊಂದೆಡೆ ರೋಹಿತ್ ಶರ್ಮಾ (2) ಕಳಪೆ ಆಟ ಮತ್ತೆ ಮುಂದುವರೆಯಿತು. ಜೋಪ್ರಾ ಆರ್ಚರ್, ಸಾಕಿಬ್ ಮಹಮೂದ್ ಇಬ್ಬರಿಗೂ ಗೇಟ್ ಪಾಸ್ ನೀಡಿ ಇಂಗ್ಲೆಂಡ್ ಹಿಡಿತ ಸಾಧಿಸಲು ನೆರವಾದರು. ಆದರೆ ಈ ಹಂತದಲ್ಲಿ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಶುಭ್ಮನ್ ಗಿಲ್ ತಂಡಕ್ಕೆ ಆಸರೆಯಾದರು.