ನವದೆಹಲಿ: ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡದ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಐಸಿಸಿ ಬ್ಯಾಟರ್ಗಳ ಶ್ರೇಯಾಂಕದಲ್ಲಿ ಬಡ್ತಿ ಪಡೆದುಕೊಂಡಿದ್ದಾರೆ. ಅವರು 781 ಅಂಕಗಳನ್ನು ಕಲೆ ಹಾಕಿದ್ದು, ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಅವರು ಶತಕ ಬಾರಿಸಿದ್ದು ಅಗ್ರ ಸ್ಥಾನದಲ್ಲಿರುವ ಬಾಬರ್ ಅಜಮ್ ( 786)ಅವರ ಅವರು ಇನ್ನು ಕೆಲವೇ ದಿನಗಳಲ್ಲಿ ಹಿಂದಿಕ್ಕಲಿದ್ದಾರೆ.
ಪಾಕಿಸ್ತಾನದ ಆತಿಥ್ಯದಲ್ಲಿ ಫೆಬ್ರವರಿ 19 ರಂದು ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಪಿ ಟೂರ್ನಿಯಲ್ಲಿ ಅವರು ಇದೇ ಲಯವನ್ನು ಮುಂದುವರಿಸಿದರೆ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರ ಸ್ಥಾನ ಅವರದ್ದಾಗಲಿದೆ.
ಆಂಗ್ಲರ ಎದುರು ಏಕದಿನ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಶ್ರೇಯಾಂಕದ ಅಗ್ರ 10ರೊಳಗೆ ಪ್ರವೇಶಿಸಿದ್ದಾರೆ. ಇದೀಗ ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ಅಗ್ರ 10 ಶ್ರೇಯಾಂಕದಲ್ಲಿ ಭಾರತ ತಂಡದಿಂದ ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಇದ್ದಾರೆ. ಮೊದಲನೇ ಏಕದಿನ ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಶ್ರೇಯಸ್ ಅಯ್ಯರ್ ಶ್ರೇಯಾಂಕದಲ್ಲಿ 10ನೇ ಸ್ಥಾನ ಅಲಂಕರಿಸಿದ್ದಾರೆ.
ರೋಹಿತ್, ಕೊಹ್ಲಿ ಕುಸಿತ
ಮತ್ತೊಂದೆಡೆ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಬ್ಯಾಟಿಂಗ್ ಶ್ರೇಯಾಂಕದಲ್ಲಿ ಕುಸಿದಿದ್ದಾರೆ. ರೋಹಿತ್ ಶರ್ಮಾ ಒಂದು ಸ್ಥಾನ ಕುಸಿದು ಮೂರನೇ ಶ್ರೇಯಾಂಕಕ್ಕೆ ಇಳಿದರೆ, ವಿರಾಟ್ ಕೊಹ್ಲಿ ಎರಡು ಸ್ಥಾನಗಳಲ್ಲಿ ಇಳಿಕೆ ಕಂಡು ಆರನೇ ಸ್ಥಾನಕ್ಕೆ ಕುಸಿದಿದ್ದಾರೆ. ರೋಹಿತ್ ಶರ್ಮಾ ಅವರು ಎರಡನೇ ಏಕದಿನ ಪಂದ್ಯ 76 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಆದರೆ, ಇವರಿಗಿಂತ ಗಿಲ್ ಅತ್ಯಂತ ಸ್ಥಿರ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. 2024ರ ಅಕ್ಟೋಬರ್ ತಿಂಗಳಲ್ಲಿ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದ ವಿರಾಟ್ ಕೊಹ್ಲಿ, ಇದೀಗ ಇಂಗ್ಲೆಂಡ್ ಸರಣಿಯ ಮೂಲಕ ಏಕದಿನ ಕ್ರಿಕೆಟ್‌ಗೆ ಮರಳಿದರೂ ಶ್ರೇಷ್ಠ ಪ್ರದರ್ಶನ ತೋರಲು ಸಾಧ್ಯವಾಗಿಲ್ಲ. ಆದಾಗ್ಯೂ ಮೂರನೇ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದಾರೆ.